

ಭೋಪಾಲ್: ಇದು ಪಕ್ಕಾ ಸಿನಿಮೀಯ ಮಾದರಿಯ ಗೂಂಡಾಗಿರಿ ಘಟನೆ. ಮಧ್ಯಪ್ರದೇಶದ ಷಜಾಪುರದಲ್ಲಿ ಮರಳು ಮಾಫಿಯಾ ತಂಡದ ಮೇಲೆ ದಾಳಿ ಮಾಡಿದ ಮಹಿಳಾ ಗಣಿ
ಇನ್ಸ್ ಪೆಕ್ಟರ್ ಹಾಗೂ ಎಂಟು ಮಂದಿ ಗೃಹರಕ್ಷಕ ದಳದವರ ಮೇಲೆ ಪ್ರತಿದಾಳಿ ನಡೆಸಿ ಹಲ್ಲೆ ಮಾಡಲಾಗಿದೆ.
ನೀವಜ್ ನದಿ ದಂಡೆಯಿಂದ ಮರಳು ಕಳ್ಳಸಾಗಣೆಯಾಗುತ್ತಿರುವ ಬಗ್ಗೆ ಮುಖ್ಯಮಂತ್ರಿ ಸಹಾಯವಾಣಿ ಸಂಖ್ಯೆಯಿಂದ ದೂರು ಕರೆ ಬಂದಾಗ, ಕಾರ್ಯಪ್ರವೃತ್ತರಾದ ಇನ್ಸ್ ಪೆಕ್ಟರ್ ರೀನಾ ಪಾಠಕ್ ತಮ್ಮ ತಂಡದೊಂದಿಗೆ ದಾಳಿ ನಡೆಸಿದ್ದಾರೆ. ಮರಳು ತುಂಬಿದ್ದ ನಾಲ್ಕು ಟ್ರಾಕ್ಟರ್‍ಗಳನ್ನು ವಶಪಡಿಸಿಕೊಳ್ಳುತ್ತಿದ್ದ ಹಾಗೆ, ಚಾಲಕರು ಹಾಗೂ ಇತರರು ತಪ್ಪಿಸಿಕೊಂಡು ಓಡಿ ಹೋಗಿದ್ದಾರೆ. ಆದರೆ ಕೆಲವೇ ಕ್ಷಣಗಳಲ್ಲಿ ದೊಡ್ಡ ಗ್ಯಾಂಗಿನೊಂದಿಗೆ ವಾಪಸ್ಸಾದ ತಂಡ ಮಾರಕಾಸ್ತ್ರ ಹಾಗೂ ಕಲ್ಲುಗಳೊಂದಿಗೆ ಪೊಲೀಸ್ ತಂಡದ ಮೇಲೆರಗಿದೆ.
ತಕ್ಷಣ ಅವರು ಅಲ್ಲಿಂದ ಓಡಿದ ಕಾರಣ ಪ್ರಾಣ ಉಳಿದಿದೆ ಜಿಲ್ಲಾ ಆಡಳಿತಾಧಿಕಾರಿ ಮಾತ್ರ ತಮಗೆ ಮಾಹಿತಿ ನೀಡದೇ ಏಕಾಏಕಿ ದಾಳಿ ಮಾಡಿದ್ದು ಪೊಲೀಸ್ ತಂಡದ ತಪ್ಪು. ಇದರಿಂದಲೇ ಪ್ರತಿದಾಳಿಗೆ ತುತ್ತಾಗಿದ್ದಾರೆ ಎಂದು ಮಹಿಳಾ ಪೊಲೀಸ್ ಪಾಠಕ್ ರನ್ನು ದೂರಿದ್ದಾರೆ.
ಮತ್ತೊಂದು ಸಿನಿಮೀಯ ಅಪಹರಣ
ನವದೆಹಲಿ: ಇನ್ನೊಂದು ಪ್ರತ್ಯೇಕ ಘಟನೆಯಲ್ಲಿ ಮರಳು ದಂಧೆಯ ಜಾಡು ಹಿಡಿದು ವಾಹನ ತಪಾಸಣೆಗೆ ನಿಂತಿದ್ದ ಟ್ರಾಫಿಕ್ ಪೊಲೀಸ್ ಅಧಿಕಾರಿಯನ್ನೇ ಅಪಹರಿಸಲಾಗಿದೆ.
ವಾಹನ ದಾಖಲೆ ತಪಾಸಣೆಗೆ ಟ್ರಕ್ ಅನ್ನು ತಡೆನಿಲ್ಲಿಸಿದಾಗ, ಪೊಲೀಸ್‍ನನ್ನು ಅಪಹರಿಸಿ ಹೊತ್ತೊಯ್ಯಲಾಗಿದ್ದು, ಸುದ್ದಿ ತಿಳಿಯುತ್ತಿದ್ದಂತೆ ಹಲವು ಪಿಸಿಆರ್ ವ್ಯಾನ್‍ಗಳು ಟ್ರಕ್ ಹೋಗುತ್ತಿರುವ ಮಾರ್ಗ ಕಂಡುಹಿಡಿದು, ಹತ್ತು ಕಿಲೋಮೀಟರ್ ಚೇಸ್ ಮಾಡಿ ಟ್ರಕ್‍ನ ಟೈರ್‍ಗಳಿಗೆ ಶೂಟ್ ಮಾಡಿ ಗಾಳಿ ತೆಗೆಯುವ ಮೂಲಕ ನಿಲ್ಲಿಸಿದ್ದಾರೆ. ಕೊನೆಗೂ ಪೊಲೀಸ್‍ನನ್ನು ರಕ್ಷಿಸಿ ಡ್ರೈವರ್ ನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.