ರಾಮ ಮಂದಿರ ನಿರ್ಮಿಸದಿದ್ದರೆ ಮೋದಿ ಸರ್ಕಾರ ಉರುಳೀತು: ವಿಎಚ್‌ಪಿ

'ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಆಗದಿದ್ದರೆ ನರೇಂದ್ರ ಮೋದಿ ಸರ್ಕಾರ ಅಧಿಕಾರ ಕಳೆದುಕೊಳ್ಳಬೇಕಾದೀತು'...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on: 

ನವದೆಹಲಿ: 'ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಆಗದಿದ್ದರೆ ನರೇಂದ್ರ ಮೋದಿ ಸರ್ಕಾರ ಅಧಿಕಾರ ಕಳೆದುಕೊಳ್ಳಬೇಕಾದೀತು' ಎಂದು ವಿಶ್ವ ಹಿಂದೂ ಪರಿಷತ್ ಬಿಜೆಪಿ ನೃತ್ವದ ಎನ್‌ಡಿಎ ಸರ್ಕಾರಕ್ಕೆ ಖಡಕ್ ಎಚ್ಚರಿಕೆ ನೀಡಿದೆ.

ಕೇವಲ ಅಭಿವೃದ್ಧಿ ಮಂತ್ರದಿಂದಾಗಿ ಬಿಜೆಪಿ ಅಧಿಕಾರಕ್ಕೆ ಬಂದಿಲ್ಲ. ಇನ್ನೂ ಹಲವು ಪ್ರಮುಖ ವಿಚಾರಗಳ ಬಗ್ಗೆ ಭರವಸೆಯಿತ್ತು ಅಧಿಕಾರ ಪಡೆದಿದೆ. ಅದರಲ್ಲಿ ರಾಮ ಮಂದಿರ ನಿರ್ಮಾಣವೂ ಒಂದು. ಈಗ ಅದನ್ನು ನಿರ್ಲಕ್ಷಿಸಿದರೆ ವಾಜಪೇಯಿ ಸರ್ಕಾರಕ್ಕಾದ ಗತಿಯೇ ಆದೀತು ಎಂದು ವಿಎಚ್‌ಪಿಯ ವಕ್ತಾರ ಸುರೇಂದ್ರ ಜೈನ್ ಸರ್ಕಾರವನ್ನು ಎಚ್ಚರಿಸಿದ್ದಾರೆ.

ಈ ವಿಚಾರಗಳನ್ನು ಮಂಡಿಸಲು ಬಿಜೆಪಿಗೆ ಸ್ಪಷ್ಟ ಜನಾದೇಶವಿಲ್ಲ ಎಂದು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಹೇಳಿಕೆ ವಿರುದ್ಧ ಗುಡುಗಿರುವ ಅವರು, ಅಧಿಕಾರಕ್ಕೆ ಬರುವಾಗ ಇದು ಪ್ರಮುಖ ವಿಚಾರವಾಗಿತ್ತು. ಆದರೆ ಈಗ್ಯಾಕೆ ನಿರ್ಲಕ್ಷ್ಯವೆಂದು ಪ್ರಶ್ನಿಸಿದ್ದಾರೆ. ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಹಿಂದಿನ ಎನ್‌ಡಿಎ ಸರ್ಕಾರ ಮಾಡಿದ ತಪ್ಪಿನಿಂದಾಗಿ ಪಾಠ ಕಲಿಯಲಿ ಎಂಬ ಕಿವಿ ಮಾತನ್ನೂ ಅವರು ಹೇಳಿದ್ದಾರೆ.

ಈ ಬಗ್ಗೆ ಎನ್‌ಡಿಎ ನಾಯಕರಿಂದ ಹಲವು ಬಗೆಯ ಹೇಳಿಕೆಗಳು ಬಂದಿದ್ದರೂ ರಾಮಮಂದಿರ ನಿರ್ಮಾಣವಾಗುವ ವಿಶ್ವಾಸ ಇನ್ನೂ ಉಳಿದಿದೆ. ಅಭಿವೃದ್ಧಿ ಕಾರ್ಯದ ನೆಪವೊಡ್ಡಿ ಮುಖ್ಯ ಆಶ್ವಾಸನೆಗಳನ್ನು ಮರೆತರೆ ಅಧಿಕಾರಕ್ಕೇ ಕುತ್ತು ಬಂದೀತು ಎಂದಿರುವ ಜೈನ್, ಶೀಘ್ರದಲ್ಲೇ ಸಾಧು ಮತ್ತು ಆಧ್ಯಾತ್ಮ ಗುರುಗಳೊಂದಿಗೆ ಸಭೆ ಸೇರಿ ಪ್ರಧಾನಿಯವರನ್ನು ಮಂದಿರ ನಿರ್ಮಾಣಕ್ಕೆ ಒತ್ತಾಯಿಸಲಾಗುವುದು ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com