

ನವದೆಹಲಿ: ನಕಲಿ ಕಾನೂನು ಪದವಿ ಪ್ರಮಾಣ ಪತ್ರ ನೀಡಿದ ಆರೋಪದ ಮೇಲೆ ಬಂಧನಕ್ಕೊಳಗಾಗಿದ್ದ ದೆಹಲಿ ಕಾನೂನು ಸಚಿವ ಜಿತೇಂದ್ರ ತೋಮರ್ ಅವರನ್ನು ದೆಹಲಿಯ ಸಾಕೇತ್ ಕೋರ್ಟ್ ಪೊಲೀಸ್ ಕಸ್ಟಡಿಗೆ ನೀಡಿದೆ.
ಮಂಗಳವಾರ ಬೆಳಗ್ಗೆ ಜಿತೇಂದ್ರ ತೋಮರನ್ನು ಬಂಧಿಸಿದ್ದ ದೆಹಲಿ ಪೊಲೀಸರು ದೆಹಲಿಯ ಸಾಕೇತ್ ಕೋರ್ಟ್ ಮುಂದೆ ಹಾಜರು ಪಡಿಸಿದರು. ಈ ವೇಳೆ ತೋಮರನ್ನು ಐದು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡುವಂತೆ ದೆಹಲಿ ಪೊಲೀಸರು ಮನವಿ ಮಾಡಿದ್ದು, ಪೊಲೀಸರ ಮನವಿಯನ್ನು ಪುರಸ್ಕರಿಸಿದ ಕೋರ್ಟ್ ನಾಲ್ಕು ದಿನಗಳ ಕಾಲ ಪೊಲೀಸರ ವಶಕ್ಕೆ ನೀಡಿದೆ.
ಪ್ರಕರಣ ಸಂಬಂಧ ನಿನ್ನೆ ರಾತ್ರಿ ಜಿತೇಂದ್ರ ತೋಮರ್ ವಿರುದ್ಧ ದೆಹಲಿ ಪೊಲೀಸರು ಎಫ್ ಐ ಆರ್ ದಾಖಲಿಸಿದ್ದು, ಇಂದು ಬೆಳಗ್ಗೆ ತೋಮರನ್ನು ಬಂಧಿಸಲಾಗಿತ್ತು.
ತೋಮರ್ ಬಂಧನಕ್ಕೆ ಆಪ್ ನಾಯಕರು ತೀವ್ರ ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಯಾವುದೇ ನೋಟಿಸ್ ನೀಡದೇ ಸಚಿವರನ್ನು ಬಂಧಿಸಲಾಗಿದೆ. ಆಪ್ ಸರ್ಕಾರದ ಮೇಲೆ ಒತ್ತಡ ಹೇರಲು ಕೇಂದ್ರ ನಾಯಕರು ಈ ಕುತಂತ್ರ ಅನುಸರಿಸಿದ್ದಾರೆ ಎಂದು ಕಿಡಿಕಾರಿದ್ದಾರೆ.