

ಕೋಝಿಕ್ಕೋಡ್ : ಕೋಝಿಕ್ಕೋಡ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ( ಕರಿಪ್ಪೂರ್ ) ದಲ್ಲಿ ಗುರುವಾರ ಗುಂಡಿನ ದಾಳಿ ಹಿನ್ನೆಲೆಯಲ್ಲಿ ಸಂಭವಿಸಿದ ಆಕ್ರಮಣಗಳಿಗೆ ಸಂಬಂಧಿಸಿದಂತೆ 50 ಸಿಐಎಸ್‌ಎಫ್ ಯೋಧರನ್ನು ಎತ್ತಂಗಡಿ ಮಾಡಲಾಗಿದೆ. ಈ ಪ್ರಕರಣದೊಂದಿಗೆ ನೇರ ಸಂಬಂಧಹೊಂದಿರುವ ಯೋಧರನ್ನು ಬೆಂಗಳೂರಿಗೆ ವರ್ಗಾವಣೆ ಮಾಡಲಾಗಿದೆ.
ಸಂಘರ್ಷ ನಡೆಯುತ್ತಿದ್ದ ವೇಳೆ ಸಿಐಎಸ್‌ಎಫ್ ಯೋಧ ಸುರೇಶ್ ಸಿಂಗ್ ಯಾದವ್ ಗುಂಡು ತಗುಲಿ ಸಾವನ್ನಪ್ಪಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‌ಐ ಸೀತಾರಾಂ ಚೌಧರಿ ವಿರುದ್ಧ ಕೇಸು ದಾಖಲಿಸಲಾಗಿದೆ. ಈ ಸಂಘರ್ಷದಲ್ಲಿ ಭಾಗಿಯಾಗಿದ್ದ 25 ಸಿಐಎಸ್‌ಎಫ್ ಯೋಧರ ವಿರುದ್ಧವೂ ಕೇಸು ದಾಖಲಿಸಲಾಗಿದೆ.
ದಾಳಿಕೋರರು ಗನ್ ಕಸಿದುಕೊಂಡು ಗುಂಡಿನ ದಾಳಿ ನಡೆಸಿದ್ದಾರೆ ಎಂದು ಸೀತಾರಂ ಹೇಳಿಕೆ ನೀಡಿದ್ದರು. ಆದರೆ ಸಿಸಿಟಿವಿ ದೃಶ್ಯಾವಳಿಯಲ್ಲಿ ಇಂಥಾ ದೃಶ್ಯಗಳು ಇಲ್ಲ. ಇದರ ಬದಲಾಗಿ ಚೌಧರಿ ಕೈಯಿಂದ ಗುಂಡು ಹಾರಾಟ ನಡೆದಿರುವ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಅದೇ ವೇಳೆ ವಿಮಾನ ನಿಲ್ದಾಣದಲ್ಲಿ ಸಂಭವಿಸಿದ ದಾಳಿಗೆ ಸಂಬಂಧಿಸಿದಂತೆ ಏರ್‌ಪೋರ್ಟ್ ಅಥೋರಿಟಿ ಆಫ್ ಇಂಡಿಯಾ (ಎಎಐ)ದ ಅಗ್ನಿ ಮತ್ತು ಸುರಕ್ಷಾ ಇಲಾಖೆಯ 9 ನೌಕರರನ್ನು ಈಗಾಗಲೇ ಬಂಧಿಸಲಾಗಿದೆ. ಬಂಧಿತರನ್ನು ಇಂದು ಮಂಜೇರಿ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ.