

ಚೆನ್ನೈ: ಕುರಿ ಹಳ್ಳಕ್ಕೆ ಬಿದ್ದರೆ ಆಳಿಗೊಂದು ಕಲ್ಲು ಎಂಬಂತಾಗಿದೆ ಕಾಂಗ್ರೆಸ್ ಪರಿಸ್ಥಿತಿ. ಇದುವರೆಗೆ ಶೀಲಾ ದೀಕ್ಷಿತ್, ಸಂದೀಪ್ ದೀಕ್ಷಿತ್‍ಆದಿಯಾಗಿ ಎಲ್ಲರೂ ಕಾಂಗ್ರೆಸ್ ಹುಳುಕುಗಳನ್ನು ಹೊರಹಾಕಿದರು. ಈಗಿನ ಸರದಿ ಮಾಜಿ ವಿತ್ತ ಸಚಿವ ಪಿ. ಚಿದಂಬರಂ ಅವರದ್ದು.
2009ರಿಂದ 2011ರ ನಡುವೆ ಕಾಂಗ್ರೆಸ್ ವಿತ್ತೀಯ ನಿಯಮ ಉಲ್ಲಂಘಿಸಿ ಕೈಗೊಂಡ ನಿರ್ಧಾರವೇ ಲೋಕಸಭಾ ಚುನಾವಣೆಯಲ್ಲಿ ಪಕ್ಷ ಹೀನಾಯವಾಗಿ ಸೋಲಲು ಕಾರಣ ಎಂದು ಅವರು ಹೇಳಿದ್ದಾರೆ. ಚೆನ್ನೈ ಲೊಯೋಲಾ ಇನ್ಸ್ ಟಿಟ್ಯೂಟ್ ಆಫ್ ಬಿಸಿನೆಸ್ ಅಡ್ಮಿನಿಸ್ಟ್ರೇಷನ್ ನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿ, 2008 ಆರ್ಥಿಕ ಸಂಕಷ್ಟದ ಸಮಯವಾಗಿತ್ತು. ಅಂತಹ ಸಮಯದಲ್ಲಿ ಯುಪಿಯ ಸರ್ಕಾರ ಹಲವಾರು ಪ್ಯಾಕೇಜ್ ಗಳನ್ನು ಘೋಷಿಸಿತು. ಇದರ ಪರಿಣಾಮ ಜನ ಮುಂದೆ ಪಕ್ಷವನ್ನು ಶಿಕ್ಷಿಸಿದರು ಎಂದರು.
ಕಾಂಗ್ರೆಸ್ ಹೆಚ್ಚುವರಿಯಾಗಿ ರು.42,500 ಕೋಟಿಯನ್ನು ಪಡೆಯಲು ಉದ್ದೇಶಿಸಿತ್ತು. ಅದನ್ನು ಯೋಜನೆಗಳೇ ಇಲ್ಲದಂತೆ ವೆಚ್ಚ ಮಾಡಲು ಉದ್ದೇಶಿಸಿತ್ತು ಎನ್ನುವ ಅಂಶವನ್ನು ಬಿಚ್ಚಿಟ್ಟರು.