

ನವದೆಹಲಿ: ಮಹಿಳೆಯರ ವಿರುದ್ಧದ ಅಪರಾಧಗಳು ನಮ್ಮನ್ನು ನಾಚಿಕೆಯಿಂದ ತಲೆತಗ್ಗಿಸುವಂತೆ ಮಾಡಿದೆ. ಮಹಿಳೆಯರ ವಿರುದ್ಧದ ತಾರತಮ್ಯ ಮತ್ತು ಅಸಮಾನತೆಯನ್ನು ಕೊನೆಗಾಣಿಸಲು ನಾವೆಲ್ಲರೂ ಹೆಗಲಿಗೆ ಹೆಗಲು ಕೊಟ್ಟು ಸಾಗಬೇಕಾಗಿದೆ. ಇದು ಪ್ರಧಾನಿ ನರೇಂದ್ರ ಮೋದಿ ಅವರು ದೇಶವಾಸಿಗಳಿಗೆ ಕೊಟ್ಟ ಕರೆ.
ಭಾನುವಾರ ವಿಶ್ವ ಮಹಿಳಾ ದಿನದ ಅಂಗವಾಗಿ ನವದೆಹಲಿಯಲ್ಲಿ ಮಾತನಾಡಿದ ಅವರು, ನಮ್ಮ ಅಭಿವೃದ್ಧಿಯ ಪಯಣದಲ್ಲಿ ಮಹಿಳೆಯರೂ ಸಮಾನ ಮತ್ತು ಪ್ರಮುಖ ಪಾಲುದಾರರು ಎಂಬುದನ್ನು ಪುನರುಚ್ಚರಿಸಿದರು. ಮಹಿಳೆಯರ ಬದುಕಲ್ಲಿ ಧನಾತ್ಮಕ ಬದಲಾವಣೆ ತರಲು ನಮ್ಮ ಸರ್ಕಾರ ಹಲವು ಯೋಜನೆಗಳನ್ನು ಕೈಗೊಂಡಿದೆ ಎಂದೂ ಹೇಳಿದರು.
ಪ್ರಧಾನಿ ಹೇಳಿದ್ದೇನು?
-ಮಹಿಳೆಯರು ಸೇರಿದಂತೆ ಎಲ್ಲ ನಾಗರಿಕರಿಗೂ ಘನತೆಯಿಂದ ಬದುಕುವ ಹಕ್ಕು ನೀಡುವುದು ನಮ್ಮ ಗುರಿ
-ಈ ಮಹಿಳಾ ದಿನದಂದು ನಾವು ಅದಮ್ಯ ಧೈರ್ಯ ಮತ್ತು ಮಹತ್ತರ ಸಾಧನೆಗೈದ ಮಹಿಳೆಯರನ್ನು ಅಭಿನಂದಿಸೋಣ
- ಮಹಿಳೆಯರಿಗೆ ನೆರವಾಗುವ ಅನೇಕ ಸಾಮಾಜಿಕ ಭದ್ರತಾ ಯೋಜನೆಗಳನ್ನು ಬಜೆಟ್‍ನಲ್ಲಿ ಘೋಷಿಸಿದ್ದೇವೆ.
-ಸರ್ಕಾರವು ಒನ್ ಸ್ಟಾಪ್ ಕೇಂದ್ರಗಳನ್ನು ಸ್ಥಾಪಿಸುತ್ತಿವೆ. ಇಲ್ಲಿ ಹಿಂಸೆಗೆ ತುತ್ತಾದ ಮಹಿಳೆಯರಿಗೆ ನೆರವು, ಕಾನೂನು ಸಲಹೆ, ಮಾನಸಿಕ ಕೌನ್ಸೆಲಿಂಗ್ ನೀಡಲಾಗುವುದು
-ಹೆಣ್ಣು ಮಕ್ಕಳ ಬಗೆಗಿನ ಭಾವನೆ ಬದಲಾಗ ಬೇಕೆಂದು `ಬೇಟಿ ಬಚಾವೋ, ಬೇಟಿ ಪಢಾವೋ' ಯೋಜನೆ ಆರಂಭಿಸಲಾಗಿದೆ.