

ಬೆಂಗಳೂರು: ವಿಎಚ್ ಪಿ ಮುಖಂಡ ಪ್ರವೀಣ್ ತೊಗಾಡಿಯಾ ಮೈಸೂರು ಪ್ರವೇಶಕ್ಕೆ ಜಿಲ್ಲಾಡಳಿತ ವಿಧಿಸಿದ್ದ ನಿರ್ಬಂಧವನ್ನು ಹೈಕೋರ್ಟ್ ಎತ್ತಿ ಹಿಡಿದಿದೆ.
ಮೈಸೂರಿಗೆ ಪ್ರವೇಶ ನಿರ್ಬಂಧಿಸಿ ಜಿಲ್ಲಾಧಿಕಾರಿ ಮಾ.8ರಂದು ಆದೇಶ ಹೊರಡಿಸಿದ್ದರು. ಇದನ್ನು ಪ್ರಶ್ನಿಸಿ ತೊಗಾಡಿಯಾ ಹೈಕೋರ್ಟ್ ಮೆಟ್ಟಿಲೇರಿದ್ದರು.
ವಿಚಾರಣೆ ನಡೆಸಿದ ನ್ಯಾ.ಅಬ್ದುಲ್ ನಜೀರ್ ಅವರ ಏಕಸದಸ್ಯ ಪೀಠ, ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಜಿಲ್ಲಾಡಳಿತ ತೊಗಾಡಿಯಾಗೆ ನಿರ್ಬಂಧ ವಿಧಿಸಿದೆ. ಈ ವಿಚಾರದಲ್ಲಿ ಕೋರ್ಟ್ ಮಧ್ಯೆ ಪ್ರವೇಶಿಸಲು ಬಯಸುವುದಿಲ್ಲ. ಜಿಲ್ಲಾಡಳಿತದ ಆದೇಶದಲ್ಲಿ ದುರುದ್ದೇಶವಿಲ್ಲ. ಅಲ್ಲದೇ ಕಾರ್ಯಕ್ರಮಕ್ಕೆ ನಿರ್ಬಂಧ ವಿಧಿಸಿಲ್ಲ ಎಂದು ಅಭಿಪ್ರಾಯಪಟ್ಟು ಅರ್ಜಿ ತಿರಸ್ಕರಿಸಿದೆ.