

ನವದೆಹಲಿ: ಮಧ್ಯಪ್ರದೇಶದ ವಿತ್ತ ಸಚಿವ ಜಯಂತ್ ಮಲೈಯ್ಯಾ ಅವರನ್ನೇ ಡಕಾಯಿತರು ಲೂಟಿ ಮಾಡಿರುವ ಘಟನೆ ಮಥುರಾದಲ್ಲಿ ನಡೆದಿದೆ.
ರೈಲ್ವೇ ಪ್ರಯಾಣಿಕರಿಗೆ ಸುರಕ್ಷತೆ ಇಲ್ಲ ಎಂಬುದು ಮತ್ತೆ ಸಾಬೀತಾಗಿದ್ದು, ಎಷ್ಟೇ ಮುಂಜಾಗ್ರತೆ ವಹಿಸಿದರೂ ಡಾಕಾಯಿತರ ಕಾಟ ಮಾತ್ರ ತಪ್ಪಿಲ್ಲ. ಡಕಾಯಿತರ ಕಾಟಕ್ಕೆ ಇದೀಗ ಮಧ್ಯ ಪ್ರದೇಶದ ವಿತ್ತ ಸಚಿವರೇ ಬೆಚ್ಚಿಬಿದಿದ್ದು, ಮಥುರಾದ ಕೋಸಿ ಕಲನ್ ಬಳಿ ಡಕಾಯಿತಿಗೆ ಒಳಗಾಗಿದ್ದಾರೆ. ಜಬಲ್ ಪುರ್-ಹಜರತ್ ಗೆ ನಿಜಾಮುದ್ದೀನ್ ಎಕ್ಸ್ ಪ್ರೆಸ್ ನ ಎಸಿ ಕಂಪಾರ್ಟ್ ಮೆಂಟ್ ನಲ್ಲಿ ಇಂದು ಬೆಳ್ಳಂ ಬೆಳ್ಳಗ್ಗೆ ಡಕಾಯಿತರು ನುಗ್ಗಿದ್ದು, ಪ್ರಯಾಣಿಕರ ಬಳಿ ಇದ್ದ ಚಿನ್ನ, ಹಣ, ಮತ್ತು ಬೆಲೆ ಬಾಳುವ ವಸ್ತುಗಳನ್ನು ಸುಲಿಗೆ ಮಾಡಿದ್ದಾರೆ. ಇದೇ ಕಾಂಪಾರ್ಟ್ ನಲ್ಲಿಯೇ ಜಯಂತ್ ಮಲೈಯ್ಯಾ ಮತ್ತು ಅವರ ಪತ್ನಿ ಕೂಡ ಪ್ರಯಾಣಿಸುತ್ತಿದ್ದು, ಅವರನ್ನು ಕೂಡ ಡಕಾಯಿತರು ದೋಚಿ ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ.
ಇದೇ ವೇಳೆ ಅದೇ ಮಾರ್ಗದಲ್ಲಿ ಪ್ರಯಾಣಿಸುತ್ತಿದ್ದ ರೈಲಿನ ಮೇಲೆಯೂ ಡಕಾಯಿತರು ದಾಳಿ ನಡೆಸಿದ್ದಾರೆ ಎಂದು ತಿಳಿದುಬಂದಿದೆ. ಇನ್ನು ಪ್ರಸ್ತುತ ಡಕಾಯಿತಿಯಿಂದ ಆಘಾತಕ್ಕೊಳಗಾಗಿರುವ ಮಲೈಯ್ಯಾ ಅವರು ಶೀಘ್ರದಲ್ಲೇ ಕೇಂದ್ರ ರೈಲ್ವೇ ಸಚಿವ ಸುರೇಶ್ ಪ್ರಭು ಅವರನ್ನು ಭೇಟಿ ಮಾಡಿ ಈ ಬಗ್ಗೆ ಮಾಹಿತಿ ನೀಡಲಿದ್ದಾರೆ ಎಂದು ತಿಳಿದುಬಂದಿದೆ. ಬಹಳ ವರ್ಷಗಳಿಂದಲೂ ಕೋಸಿ ಕಳನ್ ರೈಲ್ವೇ ಮಾರ್ಗದಲ್ಲಿ ಡಕಾಯಿತರ ಕಾಟ ಜೋರಾಗಿದ್ದು, ರೈಲ್ವೇ ಇಲಾಖೆ ಮಾತ್ರ ಈ ಬಗ್ಗೆ ಯಾವುದೇ ಮುಂಜಾಗ್ರತಾ ಕ್ರಮ ಕೈಗೊಂಡಿಲ್ಲ.