

ಮುಂಬೈ: ತಂಬಾಕು ವಿರುದ್ಧ ಕ್ಯಾಂಪೇನ್ ಮಾಡುತ್ತಿದ್ದ, ಎಲ್ಲಾ ಚಿತ್ರಮಂದಿರಗಳಲ್ಲೂ ಚಿತ್ರ ಆರಂಭಕ್ಕೂ ಮುನ್ನ ನೀಡಲಾಗುತ್ತಿದ್ದ ಜಾಗೃತಿ ಕಾರ್ಯಕ್ರಮದಲ್ಲಿ ಕಾಣಿಸಿಕೊಳ್ಳುತ್ತಿದ್ದ ಸುನಿತಾ ತೋಮರ್ ಬುಧವಾರ ಮೃತಪಟ್ಟಿದ್ದಾರೆ.
32 ವರ್ಷದ ಸುನಿತಾ ಮುಂಬೈನ ಟಾಟಾ ಮೆಮೋರಿಯಲ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಪತಿ ಮತ್ತು ಇಬ್ಬರು ಗಂಡು ಮಕ್ಕಳನ್ನು ಸುನಿತಾ ಅಗಲಿದ್ದಾರೆ. ಉಸಿರಾಟದ ತೊಂದರೆ ಹಾಗೂ ತೂಕ ಇಳಿಕೆಯಿಂದ ಅವರು ನರಳುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಇಂದು ಸಾವನ್ನಪ್ಪಿದ್ದಾರೆ ಎಂದು ವೈದ್ಯರು ಹೇಳಿದ್ದಾರೆ.
ಅವರಿಗೆ ಕ್ಯಾನ್ಸರ್ ರೋಗ ಬಂದಿದ್ದರಿಂದ ಉಸಿರಾಟದ ತೊಂದರೆ ಮತ್ತು ತೂಕ ಇಳಿಕೆಯಾಗಿತ್ತು. ಇಂತಹ ಕಾಯಿಲೆಯಿಂದ ಬದುಕುಳಿಯುವವರು ಕಡಿಮೆ ಎಂದು ಅವರು ಹೇಳಿದ್ದಾರೆ.
ತಂಬಾಕು ಸೇವನೆಯಿಂದ ಸುನಿತಾ ಅವರಿಗೆ ಬಾಯಿ ಕ್ಯಾನ್ಸರ್ ಬಂದಿತ್ತು. ಕ್ಯಾನ್ಸರ್ ರೋಗ ಬಂದ ಮೇಲೆ ತಾನು ಬದುಕುವ ಅವಧಿ ಕಡಿಮೆ ಎಂದು ತಿಳಿದಿದ್ದ ಸುನಿತಾ, ತಂಬಾಕಿನಿಂದ ಆಗುವಂತಹ ಅಪಾಯ ಕುರಿತು ಆರೋಗ್ಯ ಸಚಿವಾಲಯದೊಂದಿಗೆ ಕೈಜೋಡಿಸಿ, ತಂಬಾಕು ಸೇವಿಸಿದರೆ ತಮಗೆ ಬಂದಂತೆ ಕ್ಯಾನ್ಸರ್ ಬರುತ್ತದೆ ಎಂದು ಹೇಳಿ ಜನರಲ್ಲಿ ಅರಿವು ಮೂಡಿಸಲು ಮುಂದಾಗಿದ್ದರು. ಅಲ್ಲದೇ ಮಧ್ಯಪಾನ ತಂಬಾಕು ಸಂಬಂಧಿಸಿದಂತೆ ಜಾಹೀರಾತುಗಳಲ್ಲಿ ತಮ್ಮ ಕಥೆ ಹೇಳಿಕೊಂಡು ಜಾಗೃತಿ ಮೂಡಿಸುತ್ತಿದ್ದರು.