

ಪಶ್ಚಿಮ ಗೋದಾವಾರಿ: ಲ್ಯಾಬ್ ಟೆಕ್ನೀಶಿಯನ್ ಒಬ್ಬ ಎಕ್ಸ್ ರೇಗಾಗಿ ಬಂದ ಯುವತಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಘಟನೆ ನೆರೆಯ ಆಂಧ್ರಪ್ರದೇಶದಲ್ಲಿ ನಡೆದಿದೆ.
ಕಿಡ್ನಿಯಲ್ಲಿ ಕಲ್ಲಿದೆ ಎಂದು ಎಕ್ಸ್ ರೇ ಗಾಗಿ ಆಗಮಿಸಿದ್ದ ಭೀಮವರಂ ಜಿಲ್ಲೆಯ ವೀರವಾಸರಂ ಗ್ರಾಮದ ಯುವತಿ ಮೇಲೆ ಲ್ಯಾಬ್ ಅಸಿಸ್ಟೆಂಟ್ ಅತ್ಯಾಚಾರಕ್ಕೆ ಯತ್ನಿಸಿದ ಘಟನೆ ನಡೆದಿದೆ. ಘಟನೆಯಿಂದ ತೀವ್ರ ಭಯಭೀತಳಾದ ಯುವತಿ ಕೂಡಲೇ ಕಿರುಚಿಕೊಳ್ಳುತ್ತಾ ಹೊರಗೆ ಓಡಿ ಬಂದಿದ್ದಾಳೆ. ಬಳಿಕ ತನ್ನ ತಾಯಿಯೊಂದಿಗೆ ಸೇರಿ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾಳೆ. ಪ್ರಸ್ತುತ ಆರೋಪಿ ಲ್ಯಾಬ್ ಟೆಕ್ನೀಶಿಯನ್ ರಾಜು ನಾಪತ್ತೆಯಾಗಿದ್ದು, ಆತನ ಬಂಧನಕ್ಕಾಗಿ ಪೊಲೀಸರು ಬಲೆ ಬೀಸಿದ್ದಾರೆ.
ಏನಿದು ಘಟನೆ?
ಆಂಧ್ರಪ್ರದೇಶದ ಪಶ್ಚಿಮ ಗೋದಾವರಿ ಜಿಲ್ಲೆಯ ಭೀಮವರಂನ ವೀರವಾಸನಂ ಎಂಬ ಗ್ರಾಮದ ಯುವತಿಗೆ ಕಿಡ್ನಿಯಲ್ಲಿ ನೋವುಂಟಾದ ಕಾರಣ ಆಕೆ ಏಲೂರು ಮೆಡಿಕಲ್ ಕಾಲೇಜು ಆಸ್ಪತ್ರೆಗೆ ದಾಖಲಾಗಿದ್ದಾಳೆ. ಆಕೆಯನ್ನು ಪರೀಕ್ಷಿಸಿದ ವೈದ್ಯರು ಕಿಡ್ನಿಯಲ್ಲಿ ಕಲ್ಲಿರುವ ಶಂಕೆ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಎಕ್ಸ್ ರೇ ಮಾಡಿಸಿಕೊಂಡು ಬರುವಂತೆಯೂ ಬಳಿಕ ಚಿಕಿತ್ಸೆ ನೀಡುವುದಾಗಿ ಹೇಳಿದ್ದಾರೆ.
ವೈದ್ಯರ ಸೂಚನೆಯಂತೆ ಯುವತಿ ತನ್ನ ತಾಯಿಯೊಂದಿಗೆ ಸಮೀಪದ ಖಾಸಗಿ ಎಕ್ಸ್ ರೇ ಲ್ಯಾಬ್ ಗೆ ತೆರಳಿದ್ದಾರೆ. ಲ್ಯಾಬ್ ನಲ್ಲಿದ್ದ ರಾಜು ಎಂಬ ಟೆಕ್ನೀಶಿಯನ್ ಯುವತಿಯನ್ನು ಎಕ್ಸ್ ರೇ ಮಾಡುವುದಾಗಿ ಲ್ಯಾಬ್ ನೊಳಕ್ಕೆ ಕರೆದೊಯ್ದು ಅಲ್ಲಿ ಆಕೆಯೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾನೆ. ಯುವತಿ ಎಕ್ಸ್ ರೇ ಟೇಬಲ್ ಮೇಲೆ ಮಲಗಿದ್ದಾಗ ಆಕೆಯನ್ನು ಮಾನಭಂಗ ಮಾಡಲು ಆತ ಯತ್ನಿಸಿದ್ದಾನೆ. ಘಟನೆಯಿಂದ ಭಯಭೀತಳಾದ ಯುವತಿ ಕೂಡಲೇ ಹೊರಗೆ ಓಡಿಬಂದು ತನ್ನ ತಾಯಿಯೊಂದಿಗೆ ನಡೆದ ವಿಚಾರವನ್ನು ಹೇಳಿದ್ದಾಳೆ. ಕೂಡಲೇ ತನ್ನ ಮಗಳನ್ನು ಕರೆದೊಯ್ದ ತಾಯಿ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ.