

ಸಿಯೋಲ್: ಏಷ್ಯಾರಾಷ್ಟ್ರಗಳಲ್ಲಿ ಭಿನ್ನಮತ ಬೇಡ. ಏಷ್ಯಾಗೆ ಒಂದೇ ಮುಖ ಇರಬೇಕು. ಭಯೋತ್ಪಾದನೆಯಂಥ ಸಮಾನ ಸಮಸ್ಯೆಗಳನ್ನು ರಾಷ್ಟ್ರಗಳು ಒಂದಾಗಿ ಎದುರಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಏಷ್ಯಾ ಒಂದಾಗಿ ಬೆಳೆದರೆ ಪ್ರಾದೇಶಿಕಭಿನ್ನತೆ ಮರೆತುಹೋಗುತ್ತದೆ. ವೈರತ್ವದ ಏಷ್ಯಾ ನಮ್ಮನ್ನು ಅಭಿವೃದ್ಧಿಯಿಂದ ವಂಚಿತವಾಗಿಸುತ್ತದೆ. ಒಗ್ಗಟ್ಟಿನ ಏಷ್ಯಾ ಇಡೀ ವಿಶ್ವವನ್ನು ರೂಪಿಸುತ್ತದೆ ಎಂದು ಏಷ್ಯಾ ನಾಯಕತ್ವ ಫೋರಂನಲ್ಲಿ ಮಂಗಳವಾರ ಮೋದಿ ಅಭಿಪ್ರಾಯಪಟ್ಟಿದ್ದಾರೆ.
ಏಷ್ಯಾದ ಸಮೃದ್ಧಿ ಹಾಗೂ ಸಮಗ್ರ ಬೆಳವಣಿಗೆಗಾಗಿ ಈ ಖಂಡದ ರಾಷ್ಟ್ರಗಳು ಪರಸ್ಪರ ವೈರತ್ವ ಮರೆತು ಒಂದಾಗಬೇಕು ಎಂದಿರುವ ಅವರು, ಇದರಿಂದ ಏಷ್ಯಾಗೆ ಮಾತ್ರವಲ್ಲದೆ ಇಡೀ ವಿಶ್ವಕ್ಕೆ ಅನುಕೂಲವಾಗಲಿದೆ. ಭಯೋತ್ಪಾದನೆ, ಅಂತಾರಾಷ್ಟ್ರೀಯ ಅಪರಾಧಗಳು, ನೈಸರ್ಗಿಕ ವಿಕೋಪಗಳು ಮತ್ತು ರೋಗಗಳಂಥ ಸಮಾನ ಸವಾಲುಗಳನ್ನು ಜತೆಯಾಗಿ ಎದುರಿಸಬೇಕು ಎಂದು ಮೋದಿ ಹೇಳಿದ್ದಾರೆ.