

ಟೋಕಿಯೋ: ಜಪಾನ್ ರಾಜಧಾನಿ ಟೋಕಿಯೋದಲ್ಲಿ ಸೋಮವಾರ ಲಘು ಭೂಕಂಪನ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 5.6 ರಷ್ಟು ತೀವ್ರತೆ ದಾಖಲಾಗಿದೆ.
ಇಂದು ಬೆಳಿಗ್ಗೆ ಇದ್ದಕ್ಕಿದ್ದಂತೆ ಭೂಮಿ ಕಂಪಿಸಿದ ಪರಿಣಾಮ ಅಲ್ಲಿನ ಕಟ್ಟಡಗಳು ಬಿರುಕು ಬಿಟ್ಟಿದೆ. ಭೂಕಂಪನದಿಂದಾಗಿ ಭಯಭೀತಗೊಂಡ ಅಲ್ಲಿನ ಜನತೆ ಮನೆ ಹಾಗೂ ಕಚೇರಿಗಳಿಂದ ಹೊರ ಓಡಿ ಬಂದಿದ್ದಾರೆ. ಭೂಕಂಪನದ ತೀವ್ರತೆ ರಿಕ್ಟರ್ ಮಾಪಕದಲ್ಲಿ 5.6 ರಷ್ಟು ದಾಖಲಾಗಿದ್ದು, ಭೂಕಂಪದನ ಕೇಂದ್ರಬಿಂದು ವಾಯುವ್ಯ ಟೋಕಿಯೋವಿನ ಸುಮಾರು 50 ಕಿ.ಮೀ ದೂರದಲ್ಲಿ ಪತ್ತೆಯಾಗಿದೆ ಎಂದು ಹೇಳಲಾಗುತ್ತಿದೆ.
ಭೂಕಂಪನದಿಂದಾಗಿ ಅಲ್ಲಿನ ರೈಲು ಹಾಗೂ ವಿಮಾನ ಮಾರ್ಗಗಳನ್ನು ಈಗಾಗಲೇ ಸ್ಥಗಿತಗೊಳಿಸಲಾಗಿದ್ದು, ಸುನಾಮಿ ಸಂಭವಿಸುವ ಎಚ್ಚರಿಕೆಯನ್ನು ಅಲ್ಲಿನ ಹವಾಮಾನ ಇಲಾಖೆ ಈಗಾಗಲೇ ನೀಡಿದೆ. ಭೂಕಂಪನದಿಂದ ಯಾವುದೇ ಸಾವು ನೋವುಗಳು ಸಂಭವಿಸಿರುವುದಾಗಿ ಈ ವರೆಗೂ ವರದಿಯಾಗಿಲ್ಲ.