ಆರ್ ಎಸ್ಎಸ್ ಬಗ್ಗೆ ಟೀಕೆ: ರಾಹುಲ್ ವಿರುದ್ಧ ಕಿಡಿಕಾರಿದ ರಾಜನಾಥಸಿಂಗ್

ಆರ್ ಎಸ್ಎಸ್ ವಿರುದ್ಧ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಟೀಕೆ ಮಾಡಿರುವ ಹಿನ್ನಲೆಯಲ್ಲಿ ರಾಹುಲ್ ವಿರುದ್ಧ ವಾಗ್ಧಾಳಿಗೆ ಮುಂದಾಗಿರುವ ಕೇಂದ್ರ ಗೃಹ ಸಚಿವ ರಾಜನಾಥಸಿಂಗ್ ಅವರು, ವಿರೋಧ ಪಕ್ಷದವರಿಗೆ ಭಾರತದ ಸಂಸ್ಕೃತಿ, ಆಚಾರ-ವಿಚಾರಗಳ ಬಗ್ಗೆ ಅರಿವಿಲ್ಲ ಎಂದು ಹೇಳಿದ್ದಾರೆ...
ಕೇಂದ್ರ ಗೃಹ ಸಚಿವ ರಾಜನಾಥಸಿಂಗ್
ಕೇಂದ್ರ ಗೃಹ ಸಚಿವ ರಾಜನಾಥಸಿಂಗ್
Updated on: 

ರಾಜ್ಕೋಟ್: ಆರ್ ಎಸ್ಎಸ್ ವಿರುದ್ಧ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಟೀಕೆ ಮಾಡಿರುವ ಹಿನ್ನೆಲೆಯಲ್ಲಿ ರಾಹುಲ್ ವಿರುದ್ಧ ವಾಗ್ಧಾಳಿಗೆ ಮುಂದಾಗಿರುವ ಕೇಂದ್ರ ಗೃಹ ಸಚಿವ ರಾಜನಾಥಸಿಂಗ್ ಅವರು, ವಿರೋಧ ಪಕ್ಷದವರಿಗೆ ಭಾರತದ ಸಂಸ್ಕೃತಿ, ಆಚಾರ-ವಿಚಾರಗಳ ಬಗ್ಗೆ ಅರಿವಿಲ್ಲ ಎಂದು ಹೇಳಿದ್ದಾರೆ.

ಈ ಕುರಿತಂತೆ ರಾಜ್ಕೋಟ್ ನ ರ್ಯಾಲಿಯೊಂದರಲ್ಲಿ ಭಾಗವಹಿಸಿ ಮಾತನಾಡಿರುವ ಅವರು, ಭಾರತದಲ್ಲಿ ಶಿಕ್ಷಣ ವಲಯವನ್ನು ಆರ್ ಎಸ್ಎಸ್ ಮುನ್ನಡೆಸುತ್ತಿದೆ ಎಂಬ ರಾಹುಲ್ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ್ದು, ಎಲ್ಲಾ ದೇಶದವರನ್ನು ಒಗ್ಗೂಡುವುದು ಆರ್ ಎಸ್ಎಸ್ ನ ಉದ್ದೇಶವಾಗಿದೆ. ಈ ಹಿಂದಿದ್ದ ಸರ್ಕಾರ ಈ ರೀತಿಯ ಪ್ರಯತ್ನ ಮಾಡಲು ಭಯ ಪಡುತ್ತಿತ್ತು. ಆದರೆ, ನಮ್ಮ ಸರ್ಕಾರ ಲಿಂಗ-ಧರ್ಮ ತಾರತಮ್ಯವಿಲ್ಲದಂತೆ ಎಲ್ಲರನ್ನೂ ಒಗ್ಗೂಡಿಸುವ ಪ್ರಯತ್ನವನ್ನು ಮಾಡುತ್ತಿದೆ ಎಂದು ಹೇಳಿದ್ದಾರೆ.

ಕೇಂದ್ರ ಸರ್ಕಾರ ಆರ್ ಎಸ್ಎಸ್ ಹೆಸರು ಬಳಸಿಕೊಂಡು ಅಲ್ಪಸಂಖ್ಯಾತ ಜನರನ್ನು ಹೆದರಿಸುತ್ತಿದೆ ಎಂಬ ಆರೋಪದ ಕುರಿತಂತೆ ಮಾತನಾಡಿರುವ ಅವರು, ಇಸ್ಲಾಂನಲ್ಲಿ ಕನಿಷ್ಠ ಎಂದರೂ 72 ಬಣಗಳಿವೆ. ಇಸ್ಲಾಂ ದೇಶದಲ್ಲೇ ಈ ಎಲ್ಲಾ ಬಣಗಳ ಜನರು ಒಟ್ಟಾಗಿ ಜೀವನ ಸಾಗಿಸುತ್ತಿಲ್ಲ. ಆದರೆ, ಈ ಎಲ್ಲಾ ಬಣದ ಜನರನ್ನು ಇಂದು ಭಾರತದಲ್ಲಿ ಕಾಣಬಹುದಾಗಿದೆ. ಇದು ನಮ್ಮ ಭಾರತದ ಸಂಸ್ಕತಿ ಎಂದಿದ್ದಾರೆ.

ಇದೇ ವೇಳೆ ಮೋದಿ ವಿದೇಶ ಪ್ರವಾಸದ ಟೀಕೆಗಳ ಕುರಿತಂತೆ ಮಾತನಾಡಿರುವ ಅವರು, ಈ ಹಿಂದಿದ್ದ ಪ್ರಧಾನಮಂತ್ರಿಗಳು ರಾಜಕೀಯ ಸಂಪ್ರದಾಯವನ್ನು ಹಿಂಬಾಲಿಸುವ ಸಲುವಾಗಿ ವಿದೇಶ ಪ್ರವಾಸ ಮಾಡುತ್ತಿದ್ದರು. ಆದರೆ ನಮ್ಮ ಪ್ರಧಾನಿ ನರೇಂದ್ರ ಮೋದಿ ಅವರು, ದೇಶದ ಶಕ್ತಿಯನ್ನು ಬಲಪಡಿಸುವ ಸಲುವಾಗಿ ವಿದೇಶ ಪ್ರವಾಸಕ್ಕೆ ಹೋಗುತ್ತಿದ್ದಾರೆ. ಹೀಗಾಗಿಯೇ ಇಂದು ವಿದೇಶದ ಮಾಧ್ಯಮಗಳು ನಮ್ಮ ಪ್ರಧಾನಿಯ ವಿದೇಶ ಪ್ರವಾಸ ಕುರಿತಂತೆ ಸುದ್ದಿ ಮಾಡುತ್ತಿರುವುದು ಎಂದು ಹೇಳಿದ್ದಾರೆ.

ಕಾಂಗ್ರೆಸ್ ಯುವರಾಜ ರಾಹುಲ್ ಗಾಂಧಿ ಅವರು ಈ ಹಿಂದೆ 2 ತಿಂಗಳ ಕಾಲ ವಿದೇಶಕ್ಕೆ ಹೋಗಿ ನಾಪತ್ತೆಯಾಗಿದ್ದರು. ರಾಹುಲ್ ಗಾಂಧಿ ವಿದೇಶಕ್ಕೆ ಹೋಗಿದ್ದು ಅವರ ಪಕ್ಷದವರಿಗೆ ಗೊತ್ತಿರಲಿಲ್ಲ. ಆ ವೇಳೆ ರಾಹುಲ್ ಗಾಂಧಿ ಇದ್ದಾರೆಯೇ ಎಂಬುದರ ಕುರಿತಂತೆ ನನಗೆ ಹಲವು ಸಂಶಯಗಳು ಉಂಟಾಗಿದ್ದವು. ಇದೀಗ ದೇಶವನ್ನು ಅಭಿವೃದ್ಧಿ ಪ್ರಗತಿಯತ್ತ ಸಾಗಿಸುತ್ತಿರುವ ನಮ್ಮ ಪ್ರಧಾನಿ ಅವರ ಬಗ್ಗೆ ಬುದ್ದಿಹೀನ ಮಾತುಗಳನ್ನು ರಾಹುಲ್ ಗಾಂಧಿ ಹೇಳುತ್ತಿದ್ದಾರೆ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com