

ಲಖನೌ: ಬಿಹಾರದಲ್ಲಿ ಬಿಜೆಪಿ ವಿರುದ್ಧ ಮಹಾಮೈತ್ರಿಕೂಟ ಗೆಲುವು ಸಾಧಿಸಿರುವ ಬೆನ್ನಲ್ಲೇ ಉತ್ತರ ಪ್ರದೇಶದಲ್ಲಿ ನಡೆಯಲಿರುವ ಚುನಾವಣೆಗೂ ಮಹಾಮೈತ್ರಿ ರಚನೆಯಾಗುವ ಸಾಧ್ಯತೆ ಇದೆ.
2017ರಲ್ಲಿ ಉತ್ತರ ಪ್ರದೇಶದ ವಿಧಾನಸಭಾ ಚುನಾವಣೆ ನಡೆಯಲಿದ್ದು, ಬಿಹಾರದಂತೆಯೇ ಮಹಾಮೈತ್ರಿ ಕೂಟ ರಚನೆಯಾಗಬಹುದೆಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಹೇಳಿದ್ದಾರೆ. 2017 ರಲ್ಲಿ ಚುನಾವಣೆಯಲ್ಲಿ ಬಿಜೆಪಿಯನ್ನು ಎದುರಿಸಬೇಕಾದರೆ ಬಿಹಾರದಂತೆಯೇ ಮಹಾಮೈತ್ರಿ ರಚಿಸುವುದು ಸೂಕ್ತ ಎಂದು ಉತ್ತರ ಪ್ರದೇಶದ ಸಚಿವರೊಬ್ಬರು ಸಲಹೆ ನೀಡಿದ್ದರು. ಈ ಬಗ್ಗೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿರುವ ಅಖಿಲೇಶ್ ಯಾದವ್, ಬಿಎಸ್ ಪಿ, ಎಸ್.ಪಿ ಯನ್ನೊಳಗೊಂಡ ಮೈತ್ರಿಕೂಟ ರಚನೆ ತಳ್ಳಿಹಾಕುವಂತಿಲ್ಲ ಎಂದು ಹೇಳಿದ್ದಾರೆ.
ಲೋಕಸಭಾ ಚುನಾವಣೆಯಲ್ಲಿ ಬಿಹಾರದ ಮಾದರಿಯಲ್ಲೇ ಉತ್ತರ ಪ್ರದೇಶದಲ್ಲೂ ಬಿಜೆಪಿ ಅತಿ ಹೆಚ್ಚು ಸ್ಥಾನಗಳನ್ನು ಗಳಿಸಿತ್ತು. ಆದರೆ ನ.8 ರಂದು ಹೊರಬಿದ್ದ ಬಿಹಾರ ವಿಧಾನಸಭಾ ಚುನಾವಣೆ ಫಲಿತಾಂಶದಲ್ಲಿ ಬಿಜೆಪಿ ವಿರುದ್ಧ ಮಹಾಮೈತ್ರಿಕೂಟ ಬಹುಮತ ಗಳಿಸಿತ್ತು. ಈಗ ಇದೇ ಮಾದರಿ ಉತ್ತರ ಪ್ರದೇಶದಲ್ಲೂ ಅಳವಡಿಕೆಯಾಗುವ ಬಗ್ಗೆ ರಾಜಕೀಯ ನಾಯಕರು ಚಿಂತನೆ ನಡೆಸುತ್ತಿದ್ದಾರೆ.