ರಸ್ತೆ ಅಪಘಾತಕ್ಕೆ ದೆವ್ವ ಕಾರಣ, ಕಾಸರಗೋಡು ಕೆಎಸ್‌ಆರ್‌ಟಿಸಿ ಡಿಪೋದಲ್ಲಿ ಸುದರ್ಶನ ಹೋಮ!

ದಿನೇ ದಿನೇ ರಸ್ತೆ ಅಪಘಾತಗಳು ಹೆಚ್ಚುತ್ತಿದ್ದು, ಇದಕ್ಕೆಲ್ಲಾ ದೆವ್ವವೇ ಕಾರಣ ಅಂತಾರೆ ಕಾಸರಗೋಡು ಕೆಎಸ್‌ಆರ್‌ಟಿಸಿ ನೌಕರರು. ಇದಕ್ಕೊಂದು ಪರಿಹಾರ ಕಂಡುಕೊಳ್ಳುವುದಕ್ಕಾಗಿ...
ಕಾಸರಗೋಡು ಕೆಎಸ್ ಆರ್ ಟಿಸಿ ತುಳುನಾಡು ಡಿಪೋದಲ್ಲಿ ನಡೆದ ಸುದರ್ಶನ ಹೋಮ
ಕಾಸರಗೋಡು ಕೆಎಸ್ ಆರ್ ಟಿಸಿ ತುಳುನಾಡು ಡಿಪೋದಲ್ಲಿ ನಡೆದ ಸುದರ್ಶನ ಹೋಮ
Updated on: 
ಕಾಸರಗೋಡು: ದಿನೇ ದಿನೇ ರಸ್ತೆ ಅಪಘಾತಗಳು ಹೆಚ್ಚುತ್ತಿದ್ದು, ಇದಕ್ಕೆಲ್ಲಾ ದೆವ್ವವೇ ಕಾರಣ ಅಂತಾರೆ ಕಾಸರಗೋಡು ಕೆಎಸ್‌ಆರ್‌ಟಿಸಿ ನೌಕರರು. ಇದಕ್ಕೊಂದು ಪರಿಹಾರ ಕಂಡುಕೊಳ್ಳುವುದಕ್ಕಾಗಿ ಅವರು  ಜ್ಯೋತಿಷಿಯವರನ್ನು ಸಂಪರ್ಕಿಸಿದ್ದಾರೆ. ಅಷ್ಟೇ ಅಲ್ಲ ದೆವ್ವ ದೋಷ ಪರಿಹಾರಕ್ಕಾಗಿ ಡಿಪೋದಲ್ಲಿ ವಿಶೇಷ ಹೋಮವನ್ನೂ ಮಾಡಲಾಗಿದೆ.
ಇತ್ತೀಚೆಗೆ ಕಾಸರಗೋಡು ಕೆಎಸ್‌ಆರ್‌ಟಿಸಿ ಡಿಪೋದಲ್ಲಿ ಸುದರ್ಶನ ಹೋಮ ನಡೆದಿದ್ದು, 40ಕ್ಕಿಂತ ಹೆಚ್ಚು ನೌಕರರು ಪೂಜೆಯ ವೇಳೆ ಉಪಸ್ಥಿತರಿದ್ದರು.
ದೋಷ ಪರಿಹಾರಕ್ಕಾಗಿ ಸುದರ್ಶನ ಹೋಮ ನಡೆಸಲಾಗುತ್ತದೆ. ಈ ಹಿಂದೆ ಅಕ್ಟೋಬರ್ 22 ರಂದು ಕೆಎಸ್‌ಆರ್‌ಟಿಸಿ ತುಳುನಾಡು ಡಿಪೋದಲ್ಲಿ ಆಯುಧಪೂಜೆ ಕೂಡಾ ಮಾಡಲಾಗಿತ್ತು ಎಂದು ಸಿಐಟಿಯು ನಾಯಕ, ಶೆಡ್‌ನ  ಉಸ್ತುವಾರಿ ವಹಿಸಿರುವ ಮೋಹನ್ ಪಾಡಿ ಹೇಳಿದ್ದಾರೆ.
ಕೆಎಸ್‌ಆರ್‌ಟಿಸಿ ಡಿಪೋದಲ್ಲಿ ದೆವ್ವಗಳ ಕಾಟ ಇದೆ ಎಂದು ಕೆಎಸ್‌ಆರ್‌ಟಿಸಿ  ಚಾಲಕರು ನನ್ನನ್ನು ಸಂಪರ್ಕಿಸಿದ್ದರು ಅಂತಾರೆ ಜ್ಯೋತಿಷಿ ಕುಂಡಂಕುಳಿ ಬಾಲಕೃಷ್ಣನ್. ಹಾಗೆ  ನಾನು ಕವಡೆ ಹಾಕಿ ನೋಡಿದಾಗ 11 ದೆವ್ವಗಳು ಅಲ್ಲಿರುವುದಾಗಿ ಕಂಡು ಬಂದಿದ್ದು, ಅವುಗಳ ಉಚ್ಛಾಟನೆಗಾಗಿ ಸುದರ್ಶನ ಹೋಮ ಕೈಗೊಳ್ಳಲಾಗಿದೆ.
ಮಂಗಳೂರು ರೂಟ್‌ನಲ್ಲಿ ಅಪಘಾತಗಳ ಸಂಖ್ಯೆ ಜಾಸ್ತಿಯಾಗುತ್ತಿದ್ದ ಕಾರಣ ತಾವು ಜ್ಯೋತಿಷಿಯ ಮೊರೆ ಹೋದೆವು ಎಂದು ಚಾಲಕರು ಹೇಳುತ್ತಾರೆ.
ಸುದರ್ಶನ ಹೋಮ ನಡೆಸುವುದಕ್ಕಾಗಿ ಚಾಲಕರು ರು. 20,000 ಸಂಗ್ರಹಿಸಿದ್ದರು.  ಹೋಮದ ನಂತರ ಕವಡೆ ಹಾಕಿ ನೋಡಿದಾಗ, ಅಲ್ಲಿ ದೆವ್ವದ ಉಪಸ್ಥಿತಿ ಇರಲಿಲ್ಲ. ಈಗ ಡಿಪೋ ದೆವ್ವ ಕಾಟದಿಂದ ಮುಕ್ತವಾಗಿದೆ.
ಆದಾಗ್ಯೂ, ಕಾಸರಗೋಡು ಡಿಪೋದಲ್ಲಿ ನಡೆದ ದೆವ್ವ ಉಚ್ಛಾಟನೆ ಪ್ರಕ್ರಿಯೆ ಬಗ್ಗೆ ಕೇರಳ  ಸಾರಿಗೆ ಸಚಿವ ತಿರುವಂಚೂರು ರಾಧಾಕೃಷ್ಣನ್ ನಗೆಯಾಡಿದ್ದು, ನಮ್ಮಲ್ಲಿರುವ ಎಲ್ಲ ದೆವ್ವಗಳು ಕೆಲಸ ಮಾಡುತ್ತಿದೆ ಎಂದಿದ್ದಾರೆ. ಅದೇ ವೇಳೆ ಈ ಬಗ್ಗೆ ತನಿಖೆ ನಡೆಸುವಂತೆ ಕೆಎಸ್‌ಆರ್‌ಟಿಸಿ ಎಂಡಿಗೆ ಆದೇಶಿಸಿದ್ದಾರೆ.
ಸುಮಾರು ಒಂದು ತಿಂಗಳ ಹಿಂದೆ ಡಿಪೋದಲ್ಲಿ  ಸುದರ್ಶನ ಹೋಮ ನಡೆದಿದ್ದು, ಸಿಐಟಿಯು ಮತ್ತು ಐಎನ್‌ಟಿಯುಸಿ ಸಂಘಟನೆಗಳ ನಡುವಿನ ಜಗಳದಿಂದಾಗಿ ಹೋಮದ ವಿಷಯ ಇದೀಗ ಮಾಧ್ಯಮಗಳಿಗೆ ಬಹಿರಂಗವಾಗಿದೆ ಎಂದು ಜಿಲ್ಲಾ ಸಾರಿಗೆ ಅಧಿಕಾರಿ ಮೋಹನ್ ಕುಟ್ಟಿ ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com