

ಪಾಟ್ನ: ಉದ್ಯಮಿಯೊಬ್ಬರಿಂದ ಲಂಚ ಸ್ವೀಕರಿಸುವ ವೇಳೆ ಕ್ಯಾಮೆರಾ ಕಣ್ಣಿಗೆ ಸೆರೆ ಸಿಕ್ಕಿಬಿದ್ದಿದ್ದ ಬಿಹಾರ ನಗರಾಭಿವೃದ್ಧಿ ಸಚಿವ ಅವಧೇಶ್ ಕುಶ್ವಾಹ ಅವರು ತಮ್ಮ ಸ್ಥಾನಕ್ಕೆ ಸೋಮವಾರ ರಾಜೀನಾಮೆ ನೀಡಿದ್ದಾರೆಂದು ತಿಳಿದುಬಂದಿದೆ.
ಮುಂಬೈ ಮೂಲದ ಉದ್ಯಮಿಯೊಬ್ಬರ ಬಳಿ ಸಚಿವ ಅವಧೇಶ್ ಕುಶ್ವಾಹ ಅವರು ರು.4 ಲಕ್ಷ ಲಂಚ ಸ್ವೀಕರಿಸುತ್ತಿದ್ದ ವಿಡಿಯೋವೊಂದು ನಿನ್ನೆ ಯುಟ್ಯೂಬಿನಲ್ಲಿ ಅಪ್ ಲೋಡ್ ಆಗಿತ್ತು. ಈ ವಿಡಿಯೋ ದೇಶದಾದ್ಯಂತ ಹಲವು ವಿವಾದಗಳಿಗೆ ಕಾರಣವಾಗಿತ್ತು. ಆದರೂ, ತಾವು ಯಾವುದೇ ತಪ್ಪು ಮಾಡಿಲ್ಲ ಎಂದು ವಾದ ಮುಂದವರಿಸಿದ್ದ ಕುಶ್ವಾಹ ಅವರು, ಅರೋಪಗಳನ್ನು ತಳ್ಳಿಹಾಕಿದ್ದರಲ್ಲದೇ, ರಹಸ್ಯ ಚಿತ್ರೀಕರಣದ ವಿರುದ್ಧ ಕಾನೂನು ಹೋರಾಟ ಮಾಡುವುದಾಗಿ ಹೇಳಿದ್ದರು.
ವಿಡಿಯೋ ಬೆಳಕಿಗೆ ಬರುತ್ತಿದ್ದಂತೆ ಚುರುಕಾದ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು, ಸಚಿವರಿಂದ ಇದೀಗ ರಾಜೀನಾಮೆ ಪಡೆದಿದ್ದು, ಪಿಪಾರ ಕ್ಷೇತ್ರದಲ್ಲಿ ಜೆಡಿಯು ಅಭ್ಯರ್ಥಿಯಾಗಿ ಸ್ಪರ್ಧಿಸಲಿದ್ದ ಅವರನ್ನು ಅಭ್ಯರ್ಥಿಗಳ ಪಟ್ಟಿಯಿಂದ ತೆಗೆದು ಹಾಕಿದ್ದಾರೆ.
ಪ್ರಕರಣ ಸಂಬಂಧ ಮಾತನಾಡಿರುವ ಅವರು, ನಾವು ಭ್ರಷ್ಟಾಚಾರವನ್ನು ಎಂದಿಗೂ ಸಹಿಸುವುದಿಲ್ಲ. ಇದೀಗ ಭ್ರಷ್ಟಾಚಾರ ಆರೋಪ ಎದುರಿಸುತ್ತಿರುವ ಸಚಿವರಿಂದ ರಾಜೀನಾಮೆ ಪಡೆದಿದ್ದು, ಚುನಾವಣೆಯಲ್ಲಿ ಸ್ಪರ್ಧಿಸದಿರುವಂತೆ ಮಾಡಲಾಗಿದೆ ಎಂದು ಹೇಳಿದ್ದಾರೆ.