

ನವದೆಹಲಿ: ಸೈದ್ದಾಂತಿಕ ಕಾರಣಗಳಿಂದಾಗಿ ಸಾಹಿತ್ಯ ಅಕಾಡೆಮಿಗೆ ರಾಜಿನಾಮೆ ಸಲ್ಲಿಸುವುದು ಅಥವಾ ಪ್ರಶಸ್ತಿ ಮರಳಿಸುವುದಾದರೆ ಅದು ನ್ಯಾಯಯುತ. ಆದರೆ ಪ್ರತಿಭಟನೆಗೆ ಬೇರೆ ವಿಧಾನಗಳಿವೆ ಎಂದು ಕೇಂದ್ರ ಸಂಸ್ಕೃತಿ ಸಚಿವ ಮಹೇಶ್ ಶರ್ಮಾ ಹೇಳಿದ್ದಾರೆ.
ದಾದ್ರಿ ಹತ್ಯೆ ಘಟನೆ ಮತ್ತು ಸಾಹಿತಿ ಕಲಬುರ್ಗಿ ಕೊಲೆ ಹಿನ್ನೆಲೆಯಲ್ಲಿ ನಡೆಯುತ್ತಿರುವ ಪ್ರಶಸ್ತಿ ವಾಪಸು ಸರಣಿ ಹಾಗೂ ಅಕಾಡೆಮಿ ಸ್ಥಾನಕ್ಕೆ ರಾಜಿನಾಮೆಗಳ ಕುರಿತು ಅವರು ಮಾತನಾಡಿದ್ದಾರೆ. ಪ್ರತಿಭಟಿಸಬೇಕೆಂದಿದ್ದರೆ ಪ್ರಧಾನಿಗೆ ಪತ್ರ ಬರೆಯಬಹುದು, ಧರಣಿ ಕೂರಬಹುದು. ಸೈದ್ಧಾಂತಿಕ ವಿರೋಧದಿಂದ ರಾಜಿನಾಮೆ ನೀಡುವುದಾದರೆ ಅದು ಅವರ ಆಯ್ಕೆ, ನಾನೇನೂ ಹೇಳಲಾರೆ.
ಸಂಸ್ಕೃತಿ ಸಚಿವನಾದ ನನ್ನನ್ನು ನೇರವಾಗಿ ಉದ್ದೇಶಿಸಿ ಯಾರೂ ಇದುವರೆಗೆ ಮಾತನಾಡಿಲ್ಲ. ನನ್ನಲ್ಲಿ ಯಾರಾದರೂ ಮಾತನಾಡಿದರೆ ಅವರ ಕಳಕಳಿಯನ್ನು ಯಾರಿಗೆ ಬೇಕೋ ಅವರಿಗೆ ತಲುಪಿಸುತ್ತೇನೆ. ಅಷ್ಟಕ್ಕೂ ಸಾಹಿತ್ಯ ಅಕಾಡೆಮಿ ಸರ್ಕಾರದ ಸಂಸ್ಥೆಯಲ್ಲ. ಅದೊಂದು ಸ್ವಾಯತ್ತ ಸಂಸ್ಥೆ ಎಂದು ಶರ್ಮಾ ಹೇಳಿದ್ದಾರೆ.