

ಮುಂಬೈ: ದಾದ್ರಿ ಹಿಂಸಾಚಾರ ಪ್ರಕರಣ ಹಾಗೂ ಪಾಕಿಸ್ತಾನ ಗಾಯಕ ಗುಲಾಂ ಅಲಿ ಅವರ ಕಾರ್ಯಕ್ರಮ ರದ್ದುಗೊಳಿಸಿರುವುದು ದುರದೃಷ್ಟಕರ ಎಂದಿರುವ ಪ್ರಧಾನಿ ನರೇಂದ್ರ ಮೋದಿ ವಿರುದ್ಧವೇ ಎನ್‌ಡಿಎ ಮಿತ್ರ ಪಕ್ಷ ಶಿವಸೇನೆ ವಾಗ್ದಾಳಿ ನಡೆಸಿದೆ.
ಮೋದಿ ವಿರುದ್ಧ ವಾಗ್ದಾಳಿ ನಡೆಸಿದ ಶಿವಸೇನಾ ನಾಯಕ ಸಂಜಯ್ ರಾವುತ್ ಅವರು, 2002ರ ಗುಜರಾತ್ ದಂಗೆಯನ್ನು ಪ್ರಸ್ತಾಪಿಸಿದ್ದಾರೆ. ಗೋದ್ರಾ ಹತ್ಯೆ ಮತ್ತು ಅಹಮದಾಬಾದ್ ಘಟನೆಗಳಿಂದ ಮೋದಿ ವಿಶ್ವದಾದ್ಯಂತ ಗುರುತಿಸಿಕೊಂಡಿದ್ದಾರೆ. ಹೀಗಾಗಿಯೇ ನಾವು ಅವರನ್ನು ಗೌರವಿಸುತ್ತೇವೆ. ಆದರೆ ಪಾಕ್ ಮಾಜಿ ವಿದೇಶಾಂಗ ಸಚಿವ ಖುರ್ಷಿದ್ ಮಹಮ್ಮದ್ ಕಸೂರಿ ಹಾಗೂ ಗುಲಾಂ ಅಲಿ ಬಗ್ಗೆ ಅವರು ಈ ರೀತಿ ಹೇಳುವುದು ದುರದೃಷ್ಟಕರ ಎಂದಿದ್ದಾರೆ.
'ಅವರು ಒಬ್ಬ ಪ್ರಧಾನಿಯಾಗಿ ಈ ರೀತಿ ಹೇಳಿದ್ದಾರೆ. ಆದರೆ ಆತ್ಮೀಯ ಮೋದಿಜಿಯಾಗಿ ಅಲ್ಲ' ಎಂದು ರಾವುತ್ ತಿಳಿಸಿದರು.
ಗೋಮಾಂಸ ಸಂಗ್ರಹಿಸಿಟ್ಟಿದ ಸುಳ್ಳು ವದಂತಿಯಿಂದ ಮುಸ್ಲಿಂ ವ್ಯಕ್ತಿ ಹತ್ಯೆ ಪ್ರಕರಣದ ಬಗ್ಗೆ ಇಂದು ಮೊದಲ ಬಾರಿಗೆ ಪ್ರತಿಕ್ರಿಯಿಸಿರುವ ಮೋದಿ, ಇದೊಂದು ದುರದೃಷ್ಟಕರ ಎಂದಿದ್ದರು. ಅಲ್ಲದೆ ಗುಲಾಂ ಅಲಿ ಅವರ ಕಾರ್ಯಕ್ರಮ ರದ್ದಾಗಿರುವುದು ದುರದೃಷ್ಟಕರ ಎಂದಿದ್ದರು.