ನವದೆಹಲಿ: ಆಧಾರ್ ಕಾರ್ಡ್ ಕಡ್ಡಾಯ ಮಾಡುವ ನಿರ್ಧಾರದಿಂದ ಕೇಂದ್ರ ಸರ್ಕಾರ ಬಹುತೇಕ ಹಿಂದೆ ಸರಿದಿದೆ. ಇದನ್ನು ಕಡ್ಡಾಯ ಮಾಡಲ್ಲ, ಆದರೆ ಸ್ವಇಚ್ಛೆಯಿಂದ ಬಳಸಿಕೊಳ್ಳಬಹುದು ಎಂದು ಸುಪ್ರೀಂಕೋರ್ಟ್‍ನ ಸಂವಿಧಾನ ಪೀಠದ ಮುಂದೆ ಕೇಂದ್ರ ಅರಿಕೆ ಮಾಡಿದೆ. ಸರ್ಕಾರದ ಈ ವಾದಕ್ಕೂ ಅನುಮಾನ ವ್ಯಕ್ತಪಡಿಸಿದ ಮುಖ್ಯ ನ್ಯಾಯಮೂರ್ತಿ ಎಚ್.ಎಲ್. ದತ್ತು, ನ್ಯಾಯಮೂರ್ತಿ ಗಳಾದ ಎಂ.ವೈ. ಇಕ್ಬಾಲ್, ಸಿ.ನಾಗಪ್ಪನ್, ಅರುಣ್ ಮಿಶ್ರಾ ಮತ್ತು ಅಮಿತಾವ್ ರಾಯ್ ನೇತೃತ್ವದ ಪೀಠ, ``ಸೌಲಭ್ಯಗಳನ್ನು ನೀಡುವಾಗ ನೀವು ಆಧಾರ್ ಅನ್ನು ಕಡ್ಡಾಯ ಮಾಡುತ್ತೀರಾ? ಆಧಾರ್ ಇಲ್ಲದೇ ಇರುವ ವ್ಯಕ್ತಿಗೆ ಸೌಲಭ್ಯಗಳಿಂದ ವಂಚಿತರನ್ನಾಗಿ ಮಾಡುವುದಿಲ್ಲ ತಾನೇ?'' ಎಂದು ಕೇಂದ್ರ ಸರ್ಕಾರವನ್ನು ಪ್ರಶ್ನಿಸಿತು.