

ಬೆಂಗಳೂರು: ಎಲ್ಲರೂ ಐಟಿ-ಬಿಟಿ ಎಂದು ಹೋದರೆ ಸಂಶೋಧನೆ ಮತ್ತು ಅಭಿವೃದ್ಧಿ ಮಾಡೋರ್ಯಾರು? ಭಾರತ ಸ್ವಾವಲಂಬನೆಯಾಗಬೇಕು ಹಾಗೂ ಪ್ರಗತಿ ಸಾಧಿಸಬೇಕೆಂದರೆ ಸಂಶೋಧನೆ ಮತ್ತು ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಬೇಕಿದೆ.
ರಕ್ಷಣಾ ಇಲಾಖೆಯಲ್ಲಂತೂ ಇದು ತುರ್ತಾಗಿ ನಡೆಯಬೇಕಿದ್ದು, ಮೇಕ್ ಇನ್ ಇಂಡಿಯಾದ ಕನಸೂ ಇದೇ ಆಗಿದೆ ಎಂದು ರಕ್ಷಣಾ ಸಚಿವ ಮನೋಹರ್ ಪರ್ರಿಕ್ಕರ್ ಹೇಳಿದರು. ದಿ. ಡಾ. ಎಪಿಜೆ ಅಬ್ದುಲ್ ಕಲಾಂ ಜನ್ಮದಿನದ ಸ್ಮರಣಾರ್ಥ ಎಚ್‌ಎಎಲ್‌ನಲ್ಲಿ ಹಮ್ಮಿಕೊಂಡಿರುವ ‘ಭಾರತೀಯ ವಾಯುಕ್ಷೇತ್ರ ಮತ್ತು ರಕ್ಷಣಾ ವಲಯದಲ್ಲಿ ನಿರಂತರ ಮತ್ತು ಸಂಚಲಿತ ಸಂಶೋಧನೆ ಮತ್ತು ಅಭಿವೃದ್ಧಿ’ಎಂಬ ವಿಷಯದ ಕುರಿತ ಎರಡು ದಿನಗಳ ವಿಚಾರ ಸಂಕಿರಣವನ್ನು ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡಿದರು. ಯಾವುದೇ ದೇಶ ಪ್ರಗತಿ ಸಾಧಿಸಬೇಕಾದರೆ ಸಂಶೋಧನೆ ಮತ್ತು ಅಭಿವೃದ್ಧಿಗೆ ಒತ್ತು ಸಿಗಲೇಬೇಕು. ಮೂಲ ವಿಜ್ಞಾನ ನಿರ್ಲಕ್ಷ್ಯಿಸಿದರೆ ಅಭಿವೃದ್ಧಿ ಸಾಧ್ಯವಿಲ್ಲ.
ಡಾ. ಕಲಾಂ ಅವರು ವಿಜ್ಞಾನ ವಿಷಯದ ಬಗ್ಗೆ ಸಾಕಷ್ಟು ಕುತೂಹಲ ಮೂಡಿಸಿ ಹೋಗಿದ್ದಾರೆ. ಸಂಶೋಧನೆ ಮೂಲಕ ಆ ಕುತೂಹಲವನ್ನು ಬಳಸಿ, ಬೆಳೆಸಿಕೊಂಡು, ಮೇಕ್ ಇನ್ ಇಂಡಿಯಾ ಕನಸನ್ನು ನನಸು ಮಾಡಬೇಕಿದೆ ಎಂದರು. ರಕ್ಷಣಾ ಕ್ಷೇತ್ರದ ಸ್ವಾವಲಂಬನೆ ದೇಶಕ್ಕೆ ಅಮೂಲ್ಯ ವಿದೇಶಿ ವಿನಿಮಯವನ್ನು ಉಳಿಸುವುದಲ್ಲದೇ, ಇತರ ದೇಶಗಳಿಗೆ ನಮ್ಮ ಉತ್ಪಾದನೆಗಳನ್ನು ರಫ್ತು ಮಾಡುವ ಮೂಲಕ ಸಂಪತ್ತು ವೃದ್ಧಿಗೆ ನೆರವಾಗುತ್ತದೆ. ಅದರಲ್ಲೂ ವೈಮಾನಿಕ ಮತ್ತು ಬಾಹ್ಯಾಕಾಶ ಕ್ಷೇತ್ರಗಳಲ್ಲಿಯ ಸಂಶೋಧನೆಗೆ ಹೆಚ್ಚಿನ ಮೌಲ್ಯ ಇದೆ. ಆ ಕೆಲಸವನ್ನು ನಾವು ಉತ್ತಮವಾಗಿ ಮಾಡುತ್ತಿದ್ದು, ಅದನ್ನು ಇನ್ನಷ್ಟು ಉತ್ತಮಗೊಳಿಸುವ ಅವಶ್ಯಕತೆ ಇದೆ ಎಂದರು ಪರ್ರಿಕರ್.
ಇಸ್ರೊ ಉಪಗ್ರಹ ಕೇಂದ್ರದ ನಿರ್ದೇಶಕ ಎಂ. ಅಣ್ಣಾದುರೈ, ಬಿಇಎಲ್ ಮುಖ್ಯಸ್ಥ ಹಾಗೂ ಕಾರ್ಯನಿರ್ವಾಹಕ ನಿರ್ದೇಶಕ ಎಸ್.ಕೆ. ಶರ್ಮಾ, ಸೊಸೈಟಿ ಆಫ್ ಇಂಡಿಯನ್ ಏರೋಸ್ಪೇಸ್ ಟೆಕ್ನಾಲಜೀಸ್ ಅಂಡ್ ಇಂಡಸ್ಟ್ರೀಸ್ ಅಧ್ಯಕ್ಷ ಸಿ.ಜಿ. ಕೃಷ್ಣದಾಸ್ ನಾಯರ್ ಮುಂತಾದವರು ಹಾಜರಿದ್ದರು. ಎರಡು ದಿನಗಳ ವಿಚಾರ ಸಂಕಿರಣದಲ್ಲಿ ಬಾಹ್ಯಾಕಾಶ, ರಕ್ಷಣೆ, ಕ್ಷಿಪಣಿ, ಉಪಗ್ರಹ, ವೈಮಾನಿಕ ಕ್ಷೇತ್ರಗಳಿಗೆ ಸಂಬಂಧಿಸಿದ ವಿಷಯಗಳ ಕುರಿತು ವಿಷಯತಜ್ಞರು ಚರ್ಚೆ ನಡೆಸಲಿದ್ದಾರೆ.
ರಕ್ಷಣಾ ಸಚಿವರು ಹಿಂಬಾಗಿಲಿನಿಂದ ಹೊರಕ್ಕೆ
ಕಳಸಾ ಬಂಡೂರಿ ನದಿ ನೀರಿನ ಬಳಕೆಗೆ ಹಿಂದೆ ಗೋವಾ ಮುಖ್ಯಮಂತ್ರಿಯಾಗಿದ್ದ ಈಗಿನ ರಕ್ಷಣಾ ಸಚಿವ ಮನೋಹರ್ ಪರ್ರಿಕ್ಕರ್ ಅವರೇ ಅಡ್ಡಗಾಲು ಹಾಕಿದ್ದರು ಎಂಬ ಹಿನ್ನೆಲೆಯಲ್ಲಿ ರೈತ ಸಂಘದ ಸದಸ್ಯರು ಕೋಡಿಹಳ್ಳಿ ಚಂದ್ರಶೇಖರ್ ನೇತೃತ್ವದಲ್ಲಿ ಹಾಗೂ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಪ್ರವೀಣ್ ಶೆಟ್ಟಿ ನೇತೃತ್ವದಲ್ಲಿ ಪ್ರವೇಶದ್ವಾರದ ಬಳಿ ಪ್ರತಿಭಟನೆ ನಡೆಸುತ್ತಿದ್ದರು. ರಕ್ಷಣಾ ಸಚಿವರಿಗೆ ಮುತ್ತಿಗೆ ಹಾಕುವುದು ಅವರ ಉದ್ದೇಶವಾಗಿತ್ತು. ಈ ಹಿನ್ನೆಲೆಯಲ್ಲಿ, ವಿಚಾರ ಸಂಕಿರಣದ ಉದ್ಘಾಟನೆ ನಂತರ, ಮನೋಹರ್ ಪರ್ರಿಕ್ಕರ್ ಅವರು ಹಿಂಬಾಗಿಲ ಮೂಲಕ ನಿರ್ಗಮಿಸಿದರು. ಪ್ರತಿಭಟನೆ ಹಿನ್ನೆಲೆಯಲ್ಲಿ ಭಾರಿ ಬಂದೋಬಸ್ ವ್ಯವಸ್ಥೆ ಮಾಡಲಾಗಿತ್ತು.