

ನವದೆಹಲಿ: ಪಾಕಿಸ್ತಾನ, ಅಫ್ಘಾನಿಸ್ಥಾನ ಮತ್ತು ಉತ್ತರ ಭಾರತದಾದ್ಯಂತ ಸಂಭವಿಸಿದ ಪ್ರಬಲ ಭೂಕಂಪದ ಪರಿಣಾಮ ಮಂಗಳವಾರವೂ ಸಾವಿನ ಸಂಖ್ಯೆ ಏರಿಕೆಯಾಗಿದ್ದು, ಈ ವರೆಗೂ 311ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿರುವುದಾಗಿ ತಿಳಿದುಬಂದಿದೆ.
ಅಫ್ಘಾನಿಸ್ತಾನ ಹಾಗೂ ಪಾಕಿಸ್ತಾನದ ಅಧಿಕಾರಿಗಳು ನೀಡಿರುವ ಮಾಹಿತಿಯ ಪ್ರಕಾರ ಈ ವರೆಗೂ ಪಾಕಿಸ್ತಾನದಲ್ಲಿ 237 ಜನರು ಸಾವನ್ನಪ್ಪಿದ್ದು, ಆಫ್ಘಾನಿಸ್ತಾನದಲ್ಲಿ 74 ಮಂದಿ ಸಾವನ್ನಪ್ಪಿದ್ದಾರೆ. ಅಲ್ಲದೆ 266 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆಂದು ತಿಳಿದುಬಂದಿದೆ.
ಭೂಕಂಪ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಪಾಕಿಸ್ತಾನದ ಅಧಿಕಾರಿ ಅಮಿರ ಅಫಕ್ ಅವರು, ಘಟನಾ ಸ್ಥಳಗಳಿಗೆ ಈಗಾಗಲೇ ಭದ್ರತಾ ಸಿಬ್ಬಂದಿಗಳು ತಲುಪಿದ್ದು, ನಾಗರೀಕ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ಭೂಕಂಪದಿಂದಾಗಿ ಇದೀಗ 2000ಕ್ಕೂ ಹೆಚ್ಚು ಮಂದಿ ಮನೆಗಳನ್ನು ಕಳೆದುಕೊಂಡಿದ್ದು, ಸಂತ್ರಸ್ಥರಿಗೆ ಸರ್ಕಾರ ಇದೀಗ ವಾಸ್ತವಕ್ಕಾಗಿ ಟೆಂಟ್ ಗಳು, ಔಷಧಿಗಳು ಸೇರಿದಂತೆ ಇನ್ನಿತರೆ ಅವಶ್ಯಕ ವಸ್ತುಗಳನ್ನು ನೀಡಿದೆ ಎಂದು ಹೇಳಿದ್ದಾರೆ.
ನಿನ್ನೆಯಷ್ಟೇ ಪಾಕಿಸ್ತಾನ, ಅಫ್ಘಾನಿಸ್ತಾನ ಹಾಗೂ ಉತ್ತರ ಭಾರತದಾದ್ಯಂತ ಪ್ರಬಲ ಭೂಕಂಪ ಸಂಭವಿಸಿತ್ತು. ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದ ಗಡಿ ಪ್ರದೇಶದ ಹಿಂದೂಕುಷ್ ಪರ್ವತದಲ್ಲಿ ಭೂಕಂಪದ ಕೇಂದ್ರ ಬಿಂದು ಎಂದು ಹೇಳಲಾಗುತ್ತಿತ್ತು. ನಿನ್ನೆ ಮಧ್ಯಾಹ್ನ ಸಂಭವಿಸಿದ ಭೂ ಕಂಪನದ ತೀವ್ರತೆಯು ರಿಕ್ಟರ್ ಮಾಪಕದಲ್ಲಿ 7.7ರಷ್ಟು ದಾಖಲಾಗಿತ್ತು.
ಇದರಂತೆ ಪೇಶಾವರದಲ್ಲೂ 260 ಕಿ.ಮೀ ದೂರದಲ್ಲಿ ಭೂಕಂಪನದ ಕೇಂದ್ರ ಬಿಂದು ಕಂಡು ಬಂದಿತ್ತು. ಪರಿಣಾಮ ರಾಷ್ಟ್ರದ ರಾಜಧಾನಿ ದೆಹಲಿ ಸೇರಿದಂತೆ ಉತ್ತರ ಭಾರತದ ಹಲವೆಡೆ ಭೂಮಿ ನಡುಗಿ, ಪಂಜಾಬ್, ಛತ್ತೀಸ್ ಘಡ, ಗುಜರಾತ್ ಹಾಗೂ ಬಹುತೇಕ ಕಡೆಗಳಲ್ಲಿ ಭೂಕಂಪನವಾಗಿರುವಂತೆ ವರದಿಗಳಾಗಿತ್ತು. ಭೂಕಂಪದ ಪರಿಣಾಮ ಪಾಕಿಸ್ತಾನದಲ್ಲದೇ, ಅಫ್ಘಾನಿಸ್ತಾನದಲ್ಲೂ ಭಾರೀ ಅನಾಹುತ ಸಂಭವಿಸಿದ್ದು, 100 ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದರು. ಅಲ್ಲದೆ, ಭೂಕಂಪದಿಂದಾಗಿ ಕಾಲ್ತುಳಿತ ಉಂಟಾಗಿ ಹಲವು ವಿದ್ಯಾರ್ಥಿಗಳು ಸಾವನ್ನಪ್ಪಿದ್ದರು.
2015 ಎಪ್ರಿಲ್ ತಿಂಗಳಿನಲ್ಲಿಯೂ ನೇಪಾಳದಲ್ಲಿ 7.8 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿತ್ತು. ಪರಿಣಾಮ 9,000ಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದರು ಅಲ್ಲದೆ, 25,000ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದರು. ಇದರಂತೆ ಉತ್ತರ ಭಾರತದಲ್ಲೂ ಕಂಪನದಿಂದಾಗಿ 130 ಜನರು ಬಲಿಯಾಗಿ 560 ಕ್ಕೂ ಹೆಚ್ಚು ಜನ ಗಾಯಗೊಂಡಿದ್ದರು.