

ಮುಂಬೈ: ಮಗಳು ಶೀನಾ ಬೋರಾಳನ್ನು ಹತ್ಯೆ ಮಾಡಿದ ಆರೋಪ ಎದುರಿಸುತ್ತಿರುವ ಇಂದ್ರಾಣಿ ಮುಖರ್ಜಿ ಗಯ್ಯಾಳಿ ಆಗಿದ್ದಳು ಎಂದು ಆಕೆಯ ಪತಿ ಪೀಟರ್ ಮುಖರ್ಜಿ ಹೇಳಿದ್ದಾರೆ.
ಇಂದ್ರಾಣಿ ಮುಖರ್ಜಿ ಸಿಕ್ಕಾಪಟ್ಟೆ ಬೈಯುತ್ತಿದ್ದಳು, ಆಕೆ ತುಂಬಾ ಕೋಪಿಷ್ಠೆ. ಎಲ್ಲರ ಮೇಲೆ ಅಧಿಕಾರ ಸ್ಥಾಪಿಸುವ ಹಠ ಆಕೆಗೆ ಇತ್ತು ಎಂದು ಪೀಟರ್ ಮುಖರ್ಜಿ ಇಂದ್ರಾಣಿಯ ಬಗ್ಗೆ ಮುಂಬೈ ಪೊಲೀಸರಲ್ಲಿ ಹೇಳಿರುವುದಾಗಿ ಸುದ್ದಿ ಮಾಧ್ಯಮವೊಂದು ವರದಿ ಮಾಡಿದೆ.
ಇಂದ್ರಾಣಿ ಎಲ್ಲ ಕೋಪವನ್ನು ನನ್ನ ಮೇಲೆ ತೋರಿಸುತ್ತಿದ್ದಳು ಎಂದು ಸ್ಟಾರ್ ಸಂಸ್ಥೆಯ ಮಾಜಿ ಸಿಇಒ ಪೀಟರ್ ಹೇಳಿರುವುದಾಗಿ ಮಾಧ್ಯಮ ವರದಿ ಮಾಡಿದೆ.
ಅವಳಿಗೆ (ಇಂದ್ರಾಣಿ) ಹಲವಾರು ಸಮಸ್ಯೆಗಳು ಇದ್ದವು. ಆದರೆ ಆಸ್ತಿ ವಿಚಾರದಲ್ಲೇ ಹಲವಾರು ಸಮಸ್ಯೆಗಳು ಆಕೆಗೆ ಇದ್ದವು. ಪೀಟರ್ ಅವರ ಆಸ್ತಿಯಲ್ಲಿ ಇಂದ್ರಾಣಿ ಸಹಭಾಗಿತ್ವವೂ ಇತ್ತು ಎಂದು ಹೇಳಲಾಗುತ್ತಿದೆ.
ಇಂದ್ರಾಣಿ ವಿರುದ್ಧದ ಪ್ರಕರಣವನ್ನು ಇನ್ನಷ್ಟು ಗಟ್ಟಿಗೊಳಿಸುವ ಸಲುವಾಗಿ ಪೊಲೀಸರು ಪೀಟರ್ ಅವರ ಹೇಳಿಕೆಯನ್ನು ಆರೋಪ ಪಟ್ಟಿಯಲ್ಲಿ ಉಲ್ಲೇಖಿಸಲಿದ್ದಾರೆ.
ಇಂದ್ರಾಣಿ ತನ್ನ ಮಾಜಿ ಪತಿ ಸಂಜೀವ್ ಖನ್ನಾ ಮತ್ತು ಆಕೆಯ ಡ್ರೈವರ್ ಜತೆ ಸೇರಿ ಏಪ್ರಿಲ್ 24, 2012 ರಲ್ಲಿ ಶೀನಾ ಬೋರಾಳನ್ನು ಹತ್ಯೆಗೈದಿದ್ದರು.