

ಎಪ್ಪತ್ತು ವರ್ಷ ಕಳೆದರೂ ಸ್ವಾತಂತ್ರ್ಯ ಸೇನಾನಿ ನೇತಾಜಿ ಸುಭಾಷ್‍ಚಂದ್ರ ಬೋಸ್ ಅವರ ಸಾವಿನ ರಹಸ್ಯ ಬಯಲಾಗಿಲ್ಲ. ಆದರೂ ಅವರು ಆಗಿನ ಸೋವಿಯತ್ ರಷ್ಯಾದಲ್ಲಿದ್ದರು, ಚೀನಾದಲ್ಲಿ ಸೇನೆಯೊಂದನ್ನು ಕಟ್ಟುತ್ತಿದ್ದರು, ಉತ್ತರಪ್ರದೇಶದಲ್ಲಿ ಬಾಬಾ ಆಗಿ ಕೊನೆಗಾಲ ಕಳೆದರು, ಹೀಗೆ ನಾನಾ ಕಥೆಗಳಿಗೆ ಕೊನೆಯಿಲ್ಲ. ನೇತಾಜಿ ಚೀನಾದಲ್ಲಿ ನೆಹರೂ ವಿರುದ್ಧ ಮತ್ತೊಂದು ಸೇನೆ ಕಟ್ಟುತ್ತಿದ್ದರು. ಇದರಿಂದಾಗಿಯೇ ನೆಹರೂ ನೇತಾಜಿ ಕುಟುಂಬದ ವಿರುದ್ಧ ಬೇಹುಗಾರರನ್ನು ಛೂ ಬಿಟ್ಟಿದ್ದರು ಎನ್ನುವ ಸಿದ್ಧಾಂತಗಳೂ ಇವೆ. ಆದರೆ, ಇದು ಸತ್ಯ, ಇದು ಮಿಥ್ಯ ಎಂದು ಖಚಿತವಾಗಿ ಹೇಳಬಲ್ಲ ದಾಖಲೆಗಳು ಯಾರಲ್ಲೂ ಇಲ್ಲ. ಆದರೂ ನೇತಾಜಿ ಸಾವಿನ ಸುತ್ತ ನಡೆಯುವ ರಾಜಕೀಯಕ್ಕೆ ಬರವಿಲ್ಲ.
ಆ.18, 1945ರಂದು ನೇತಾಜಿ ಸೇರಿ 13 ಮಂದಿ ಇದ್ದ ವಿಮಾನ ತೈವಾನ್ ನಲ್ಲಿ ಗಗನಕ್ಕೇರಿದ ಕೆಲವೇ ಕ್ಷಣಗಳಲ್ಲಿ ದುರಂತಕ್ಕೀಡಾಗಿತ್ತು. ದುರಂತದಲ್ಲಿ ನೇತಾಜಿ ಮೃತಪಟ್ಟಿದ್ದಾರೆ ಎಂದು ಹೇಳಿದ್ದೇ ಈವರೆಗೆ ನಮಗೆ ಗೊತ್ತಿದ್ದ ಸತ್ಯ. ಆದರೆ, ಈ ಕಥೆಯನ್ನು ನೇತಾಜಿ ಸಹವರ್ತಿಗಳು, ಕುಟುಂಬಸ್ಥರು ಒಪ್ಪುತ್ತಿಲ್ಲ. ಇದಕ್ಕೆ ಕಾರಣವೂ ಇದೆ. ಸಾವಿನ ಸುತ್ತಸುತ್ತಿಕೊಂಡಿರುವ ಸಂಶಯಗಳು ಹಾಗೂ ನೇತಾಜಿ ಬದುಕಿನ ಕುರಿತು ಕಾಲಕಾಲಕ್ಕೆ ಧುತ್ತೆಂದು ಪ್ರತ್ಯಕ್ಷ ವಾಗುತ್ತಿದ್ದ ಹೊಸ ಮಾಹಿತಿಗಳು. ಈ ಸಂಶಯಗಳನ್ನು ನಿವಾರಿಸ ಬೇಕಿದ್ದ ಸರ್ಕಾರದ ನಿಗೂಢ ನಡೆ ಕೂಡ ಜನರ ಅನುಮಾನವನ್ನು ಮತ್ತಷ್ಟು ಹೆಚ್ಚಿಸಿದ್ದವು. ಇದರ ಜತೆಗೆ ಅಮೆರಿಕ, ಬ್ರಿಟನ್ ನ ಗುಪ್ತಚರ ಸಂಸ್ಥೆ ಜತೆಗೆ, ಅವರ ಸಾವಿನ ಕುರಿತ ತನಿಖೆಗೆ ನೇಮಿಸಲಾದ ಮುಖರ್ಜಿ ಸಮಿತಿ ಕೂಡ ನೇತಾಜಿ 1945ರಲ್ಲಿ ಮೃತ ಪಟ್ಟಿರಲಿಕ್ಕಿಲ್ಲ ಎನ್ನುತ್ತದೆ.
ಸೈಬಿರಿಯಾದಿಂದ ಚೀನಾವರೆಗೆ
ಭಾರತವಾಗಲಿ, ಬ್ರಿಟನ್ ಸರ್ಕಾರವಾಗಲಿ ನೇತಾಜಿ ಮೃತ ಪಟ್ಟಿದ್ದಾರೆ ಎಂದು ಎಲ್ಲೂ ಅಧಿಕೃತವಾಗಿ ಘೋಷಿಸಿಲ್ಲ. ಇತಿಹಾಸಕಾರ ಲಿಯೊನಾರ್ಡ್ ಗೋರ್ಡನ್ ಭಾರತದ ಮಧ್ಯಂತರ ಸರ್ಕಾರಕ್ಕೂ ಈ ಸತ್ಯದ ಕುರಿತು ಗೊಂದಲವಿತ್ತು. ಈ ಹಿಂದೆಯೂ ಬೋಸ್ ಅನೇಕ ಬಾರಿ ನಾಪತ್ತೆಯಾಗಿ ಬಿಟ್ಟಿದ್ದರು. ಹಾಗಾಗಿ ನೇತಾಜಿ ಸಾವಿಗೀಡಾಗಿಲ್ಲ ಎಲ್ಲೋ ತಲೆಮರೆಸಿಕೊಂಡಿದ್ದಾರೆ ಎನ್ನುವ ಸುದ್ದಿಗಳೇ 1945ರಲ್ಲಿ ಬಲವಾಗಿ ಕೇಳಿಬರುತ್ತಿತ್ತು. 1949ರ ವರೆಗಿನ ಕಾಲಘಟ್ಟದ ಕುರಿತು ಬೆಳಕು ಚೆಲ್ಲುವ ಸಿಐಎ ಮತ್ತು ಬ್ರಿಟನ್ ನ ಗುಪ್ತಚರ ಸಂಸ್ಥೆಗಳ ದಾಖಲೆಗಳೂ ನೇತಾಜಿ ಬದುಕಿದ್ದರು ಎನ್ನುವುದಕ್ಕೆ ಪುರಾವೆ ಒದಗಿಸುವಂತಿವೆ.
ನೇತಾಜಿ ಆಗ್ನೇಯ ಏಷ್ಯಾದಲ್ಲಿ ಕಮ್ಯುನಿಸ್ಟ್ ಬಂಡಾಯಕ್ಕೆ ವೇದಿಕೆ ಸಿದ್ಧಪಡಿಸುತ್ತಿದ್ದಾರೆ. ಇದಕ್ಕಾಗಿ ಚೀನಾದ ನೆರವು ಪಡೆಯುತ್ತಿದ್ದಾರೆ ಎಂದೇ ಈ ದಾಖಲೆಗಳಲ್ಲಿ ಹೇಳಲಾಗಿತ್ತು. ಆಗಿನ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಕೂಡ ನೇತಾಜಿ ಸಂಬಂಧಿ ಅಮಿಯಾ ನಾಥ್ ಬೋಸ್‍ರಿಗೆ 1948ರಲ್ಲಿ ನೇತಾಜಿ ಬದುಕಿದ್ದಾರೆನ್ನುವ ಅರ್ಥದಲ್ಲೇ ಉತ್ತರ ನೀಡಿತ್ತು.
ಹಾಗಿದ್ದರೆ ಏನಾಯ್ತು
ನೇತಾಜಿ ತೈವಾನ್ ನಲ್ಲಿ ನಡೆದ ವಿಮಾನ ದುರಂತದಲ್ಲಿ ಮೃತಪಟ್ಟಿಲ್ಲವಾದರೆ ಅವರು ಎಲ್ಲಿಗೆ ಹೋದರು? ಏನು ಮಾಡುತ್ತಿದ್ದರು ಎನ್ನುವ ಪ್ರಶ್ನೆಗಳು ಹುಟ್ಟಿಕೊಳ್ಳುವುದು ಸಹಜ. ಆ ಪ್ರಶ್ನೆಗೆ ಕೇಂದ್ರದ ಬಳಿ ಇರುವ ಕಡತಗಳು ಉತ್ತರ ನೀಡಬಹುದೇನೋ? ಆದರೆ ಅವರ ಸಾವಿನ ರಹಸ್ಯದ ಬೆನ್ನು ಬಿದ್ದ ಪ್ರತಿ ಸಂಶೋಧಕರು ಒಂದೊಂದು ರೀತಿಯ ಕಥೆಯನ್ನು ಜನರ ಮುಂದಿಡುತ್ತಾರೆ.
ಸೈಬಿರಿಯಾದಲ್ಲಿದ್ದರು
ನೇತಾಜಿ ಸಾವಿನ ವಿಚಾರ ಕಿವಿಗೆ ಬಿದ್ದಾಗ ಹಿರಿಯ ನಾಯಕ ಜೆ.ಆರ್. ಭೋಸ್ಲೆ ಕೂಡ ನಂಬಲಿಲ್ಲ. ಮಹಾತ್ಮಾ ಗಾಂಧೀಜಿ ಕೂಡ ನೇತಾಜಿ ಮೃತಪಟ್ಟಿರಲಿಕ್ಕಿಲ್ಲ. ಅವರೆಲ್ಲೋ ಜೀವಂತವಾಗಿರಬೇಕು ಎಂದಿದ್ದರು. ಜತೆಗೆ ಅವರ ಕುಟುಂಬದ ವರು ಶ್ರಾದ್ಧ ಮಾಡಲು ಹೊರಟಾಗಲೂ ಗಾಂಧೀಜಿ ತಡೆದಿದ್ದರು. ಆಗ ಕಾಲದಲ್ಲಿ ಹೆಚ್ಚು ಚಾಲ್ತಿಯಲ್ಲಿದ್ದ ಪುಕಾರೆಂದರೆ ಬೋಸ್ ಆಗಿನ ಸೋವಿಯತ್ ಒಕ್ಕೂಟದ ನಿಯಂತ್ರಣದಲ್ಲಿದ್ದ ಮಂಚುರಿಯಾ (ಈಗ ಚೀನಾದಲ್ಲಿದೆ) ಪ್ರದೇಶದಲ್ಲಿ ಬಂಧಿಯಾಗಿದ್ದರು ಅಥವಾ ತಲೆಮರೆಸಿಕೊಂಡಿರಬಹುದು ಎನ್ನುವುದು.
ಕೊಲ್ಕತಾ ವಿವಿಯ ಪ್ರೊಫೆಸರ್ ಡಾ. ಸರೋಜ್ ದಾಸ್ ಅವರು ತಮ್ಮ ಗೆಳೆಯ ಡಾ. ಆರ್.ಸಿ. ಮಜುಂದಾರ್ ಅವರಿಗೆ ಆಗಿನ ವಿದೇಶಾಂಗ ಸಚಿವ ಡಾ. ರಾಧಾಕೃಷ್ಣನ್ ಅವರು ಬೋಸ್ ರಷ್ಯಾದ ಲ್ಲಿದ್ದಾರೆ ಎಂದು ಹೇಳಿದ್ದರಂತೆ. ಮತ್ತೊಂದು ವರದಿ ಪ್ರಕಾರ ವಿದೇಶಾಂಗ ಇಲಾಖೆಯ ಮಾಜಿ ಅಧಿಕಾರಿ ಡಾ. ಸತ್ಯನಾರಾಯಣ ಸಿನ್ಹಾ ಅವರು ಸಿಪಿಐ ಸಂಸ್ಥಾಪಕ ಅಬ್ನಿ ಮುಖರ್ಜಿ ಪುತ್ರ ಜಿಯಾರ್ಜಿ ಅವರಿಗೆ ಅಬ್ನಿ ಹಾಗೂ ನೇತಾಜಿ ಸೈಬೀರಿಯಾದ ಜೈಲಿನಲ್ಲಿದ್ದಾರೆ ಎಂದಿದ್ದರಂತೆ.
ಮಾಸ್ಕೋದಲ್ಲಿ ಇಂಡಿಯಾ ರಷ್ಯಾದ ಸಂಬಂಧದ ಕುರಿತು ಅಧ್ಯಯನ ನಡೆಸುತ್ತಿದ್ದ ಏಷ್ಯಾಟಿಕ್ ಸೊಸೈಟಿಯ ತಂಡವೊಂದಕ್ಕೆ 1995ರಲ್ಲಿ ಒಂದಷ್ಟು ರಹಸ್ಯ ದಾಖಲೆಗಳು ಸಿಕ್ಕಿದ್ದವು. ಅವುಗಳು 1945ರ ಬಳಿಕ ಬೋಸ್ ಸೋವಿಯತ್ ರಷ್ಯಾದಲ್ಲೇ ಇದ್ದರು ಎನ್ನುವುದಕ್ಕೆ ಸುಳಿವು ನೀಡುತ್ತವೆ. ತಂಡದ ಭಾಗವಾಗಿದ್ದ ಡಾ. ಪುರೋಬಿ ರಾಯ್ ಅವರಿಗೆ ರಷ್ಯಾದ ಪದ್ದೊಲೊಸ್ಕ್‍ನಲ್ಲಿ 1946ರ ಸೀಕ್ರೆಟ್ ದಾಖಲೆಯೊಂದು ಪತ್ತೆಯಾಗಿತ್ತು.
ಬೋಸ್ ಅವರನ್ನು ರಷ್ಯಾದಲ್ಲಿ ಉಳಿಸಿಕೊಳ್ಳಬೇಕೇ ಬೇಡವೇ ಎನ್ನುವ ಕುರಿತು ಸ್ಟಾಲಿನ್ ಹಾಗೂ ಮೊಲೊಟೊವ್ ಚರ್ಚಿಸಿದ್ದ ವಿಚಾರ ಅದರಲ್ಲಿತ್ತು. ಭಾರತದಲ್ಲಿ ನೆಹರೂ ಅಥವಾ ಗಾಂಧಿ ಜತೆಗೆ ಕೆಲಸ ಮಾಡಲು ಸಾಧ್ಯವಿಲ್ಲ. ನಾವು ಬೋಸ್‍ರನ್ ನೇ ನೆಚ್ಚಿಕೊಳ್ಳಬೇಕು ಎಂದು ಕೆಜಿಬಿಯ 1946ರ ಕಾಲಘಟ್ಟದ ವರದಿಯೊಂದು ಹೇಳುತ್ತದೆ. ಇದು ಮುಂಬೈನಲ್ಲಿ ಪತ್ತೆಯಾಗಿತ್ತು. ಇದನ್ನು ಕೂಡ ರಾಯ್ ಪರಿಶೀಲಿಸಿದ್ದಾರೆ. ಹಾಗಾಗಿ ಬೋಸ್ 1945 ರ ನಂತರವೂ ಬದುಕಿದ್ದರು ಎನ್ನುತ್ತಾರೆ ರಾಯ್ .