

ಪಾಟ್ನ: ಬಿಹಾರ ವಿಧಾನಸಭಾ ಚುನಾವಣೆ ಸಂಬಂಧ ಮತದಾರರನ್ನು ಒಲಿಸಿಕೊಳ್ಳಲು ಹಲವು ಆಮಿಷವೊಡ್ಡಿದ್ದಾರೆಂಬ ಆರೋಪದಡಿ ಬಿಜೆಪಿ ನಾಯಕ ಸುಶೀಲ್ ಕುಮಾರ್ ಮೋದಿ ವಿರುದ್ಧ ಮಂಗಳವಾರ ಎಫ್ಐಆರ್ ದಾಖಲಾಗಿದೆ.
ವಿಧಾನಸಭಾ ಚುನಾವಣೆ ನಿಮಿತ್ತ ನಿನ್ನೆ ಬಬುವಾದ ರ್ಯಾಲಿಯೊಂದರಲ್ಲಿ ಮಾತನಾಡಿದ್ದ ಸುಶೀಲ್ ಕುಮಾರ್ ಮೋದಿ, ಸ್ಥಳೀಯ ನಾಗರೀಕರಿಗೆ ಉಚಿತ ಲ್ಯಾಪ್ ಟಾಪ್, ಕಲರ್ ಟಿವಿ ಹಾಗೂ ಮಹಿಳೆಯರಿಗೆ ಸೀರೆಗಳನ್ನು ನೀಡುವುದಾಗಿ ಆಮಿಷವೊಡ್ಡಿದ್ದರು ಎಂದು ಹೇಳಲಾಗುತ್ತಿತ್ತು. ಇದೀಗ ಈ ಪ್ರಕರಣ ಸಂಬಂಧ ತನಿಖೆ ನಡೆಸಿರುವ ಅಧಿಕಾರಿಗಳು ಪ್ರಕರಣ ಸಂಬಂಧ ಕೈಮೂರ್ ಜಿಲ್ಲೆಯ ಬಬುವಾ ಪೊಲೀಸ್ ಠಾಣೆಯಲ್ಲಿ ಸುಶೀಲ್ ಕುಮಾರ್ ಮೋದಿ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ ಎಂದು ತಿಳಿದುಬಂದಿದೆ.
ಬಿಹಾರದಲ್ಲಿ ಅಕ್ಟೋಬರ್ 12 ರಿಂದ ನವೆಂಬರ್ 5 ರವರೆಗೆ 243 ಕ್ಷೇತ್ರಗಳಲ್ಲಿ ಚುನಾವಣೆ ನಡೆಯಲಿದ್ದು, ನವೆಂಬರ್ 8 ರಂದು ಮತಎಣಿಕೆ ನಡೆಯಲಿದೆ ಎಂದು ತಿಳಿದುಬಂದಿರುವ ಹಿನ್ನೆಲೆಯಲ್ಲಿ ಈಗಾಗಲೇ ಮತದಾರರ ಮನವೊಲಿಸಲು ಪಕ್ಷೇತರ ನಾಯಕರು ಸಕಲ ಯತ್ನ ನಡೆಸುತ್ತಿದ್ದಾರೆ.