

ಮಥುರಾ: ಗುರುವಾರ ನಡೆದ ಭಾರತ-ಬಾಂಗ್ಲಾ ನಡುವಿನ ಹೈ ವೋಲ್ಟೇಜ್ ಪಂದ್ಯ ನೋಡುತ್ತಿದ್ದ ವೈದ್ಯನ ನಿರ್ಲಕ್ಷ್ಯಕ್ಕೆ ಯುವಕನೊಬ್ಬನಿಗೆ ಸರಿಯಾದ ಸಮಯಕ್ಕೆ ಚಿಕಿತ್ಸೆ ದೊರಕದೆ ಆಸ್ಪತ್ರೆಯಲ್ಲೇ ಸಾವನ್ನಪ್ಪಿರುವ ಘಟನೆಯೊಂದು ನಡೆದಿದೆ.
ಸೋನು ಸಾವನ್ನಪ್ಪಿದ್ದ ಯುವಕ. ಮಂತ್ ಮುಲಾದಲ್ಲಿನ ನಿವಾಸಿಯಾಗಿರುವ ಸೋನು ಮತ್ತು ಮೋನು ಎಂಬ ಇಬ್ಬರು ಯುವಕರ ಮೇಲೆ ಅಲ್ಲಿನ ಸ್ಥಳೀಯನೇ ಆಗಿದ್ದ ರಯೀಜ್ ಹಾಗೂ ಆತನ ಸಹಚರರು ಹಲ್ಲೆ ನಡೆಸಿದ್ದಾರೆ. ಹಲ್ಲೆ ನಡೆಸುವಾಗ ಮೋನು ಎಂಬ ಯುವಕ ಓಡಿಹೋಗಿದ್ದಾನೆ. ಆದರೆ, ಸೋನು ಗುಂಪಿನಲ್ಲಿ ಸಿಕ್ಕಿಹಾಕಿಕೊಂಡ ಕಾರಣ ಹಲ್ಲೆಗೊಳಗಾಗಿ ಗಂಭೀರವಾಗಿ ಗಾಯಗೊಂಡಿದ್ದಾನೆ.
ಈ ವೇಳೆ ಆತನ ಕುಟುಂಬಸ್ಥರು ಸೋನು ನನ್ನು ಸ್ಥಳದಲ್ಲೇ ಇದ್ದ ರವಿ ಎಂಬ ಆಸ್ಪತ್ರೆಯೊಂದಕ್ಕೆ ದಾಖಲು ಮಾಡಿದ್ದಾರೆ. ಸೋನು ನನ್ನು ದಾಖಲು ಮಾಡಿರುವ ದಿನವೇ ಭಾರತ-ಬಾಂಗ್ಲಾ ನಡುವಿನ ಸೆಮಿಫೈನಲ್ ಪಂದ್ಯಾವಳಿ ಇದ್ದ ಕಾರಣ ಆಸ್ಪತ್ರೆಯಲ್ಲಿದ್ದ ವೈದ್ಯರು ಹಾಗೂ ಸಿಬ್ಬಂದಿಗಳೆಲ್ಲಾ ಪಂದ್ಯ ವೀಕ್ಷಣೆಯಲ್ಲಿ ಬಿಜಿಯಾಗಿದ್ದಾರೆ.
ಕೆಲವು ಸಿಬ್ಬಂದಿಗಳು ಮಾತ್ರ ಸೋನುವಿಗೆ ಪ್ರಾಥಮಿಕ ಚಿಕಿತ್ಸೆ ನೀಡಿ, ನೋವು ನಿವಾರಕ ಇಂಜೆಕ್ಷನ್ ನ್ನು ನೀಡಿದ್ದಾರೆ. ಆದರೆ, ವೈದ್ಯರು ಮಾತ್ರ ಆತನನ್ನು ಪರೀಕ್ಷಿಸದೆ ಪಂದ್ಯ ವೀಕ್ಷಿಸುತ್ತಿದ್ದರು. ಸೋನುವಿಗೆ ಸೂಕ್ತ ಸಮಯಕ್ಕೆ ಚಿಕಿತ್ಸೆ ದೊರಕದೆ ಪಂದ್ಯಾ ಮುಗಿಯುವ ವೇಳೆ ಉಸಿರಾಟ ಸಮಸ್ಯೆ ಎದುರಾಗಿ ಸಾವನ್ನಪ್ಪಿದ್ದ ಎಂದು ಸೋನು ತಂದೆ ಆರೋಪ ವ್ಯಕ್ತಪಡಿಸಿದ್ದಾರೆ.
ಇದರಂತೆ ಸೋನು ಪೋಷಕರು ಆಸ್ಪತ್ರೆಯ ಬಳಿ ಪ್ರತಿಭಟನೆ ನಡೆಸುತ್ತಿದ್ದು, ವೈದ್ಯರ ವಿರುದ್ಧ ಕ್ರಮ ಕೈಗೊಳ್ಳುವವರೆಗೂ ಮರಣೋತ್ತರ ಪರೀಕ್ಷೆ ನಡೆಸಲು ಮೃತದೇಹವನ್ನು ಪೊಲೀಸರಿಗೆ ನೀಡುವುದಿಲ್ಲ ಎಂದು ಪಟ್ಟು ಹಿಡಿದಿದ್ದರು. ನಂತರ ಸುದ್ದಿ ಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ್ದ ಮಥುರಾದ ಮುಖ್ಯ ವೈದ್ಯಕೀಯ ಅಧಿಕಾರಿ ಕೆ.ಪಿ. ಗಾರ್ಗ್ ಅವರು ವೈದ್ಯರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿ ಪ್ರತಿಭಟನೆ ಹಿಂಪಡೆಯುವಂತೆ ಮಾಡಿದರು.
ಪ್ರಕರಣ ಸಂಬಂಧ ಪ್ರತಿಕ್ರಿಯೆ ನೀಡಿರುವ ಗಾರ್ಗ್ ಅವರು, ಡಾ. ಧರ್ಮವೀರ್, ಡಾ. ಸುಶೀಲ್ ಹಾಗೂ ನರ್ಸ್ ಪೂನಮ್ ಶರ್ಮಾ ವಿರುದ್ಧ ಕ್ರಮ ಕೈಗೊಳ್ಳುವಂತೆ ಆರೋಗ್ಯ ಪ್ರಧಾನ ಕಾರ್ಯದರ್ಶಿಯವರಿಗೆ ಶಿಫಾರಸ್ಸು ಮಾಡಲಾಗಿದೆ ಎಂದು ಹೇಳಿದ್ದಾರೆ.