ವಿಜಯ್ ಮಲ್ಯ ರು. 4000 ಕೋಟಿ ಪ್ರಸ್ತಾವನೆ ತಿರಸ್ಕರಿಸಿದ ಬ್ಯಾಂಕ್ ಗಳು

ಮದ್ಯದ ದೊರೆ ವಿಜಯ್ ಮಲ್ಯ ಅವರು ಮುಂದಿಟ್ಟಿದ್ದ ರು. 4000 ಕೋಟಿ ಸಾಲ ಮರುಪಾವತಿ ಪ್ರಸ್ತಾವವನ್ನು ಬ್ಯಾಂಕ್ ಗಳು ತಿರಸ್ಕರಿಸಿದ್ದು, ರು. 4000 ಕೋಟಿ ಮಲ್ಯ ತೆಗೆದುಕೊಂಡಿರುವ...
ಮದ್ಯದ ದೊರೆ ವಿಜಯ್ ಮಲ್ಯ (ಸಂಗ್ರಹ ಚಿತ್ರ)
ಮದ್ಯದ ದೊರೆ ವಿಜಯ್ ಮಲ್ಯ (ಸಂಗ್ರಹ ಚಿತ್ರ)
Updated on: 

ನವದೆಹಲಿ: ಮದ್ಯದ ದೊರೆ ವಿಜಯ್ ಮಲ್ಯ ಅವರು ಮುಂದಿಟ್ಟಿದ್ದ ರು. 4000 ಕೋಟಿ ಸಾಲ ಮರುಪಾವತಿ ಪ್ರಸ್ತಾವವನ್ನು ಬ್ಯಾಂಕ್ ಗಳು ತಿರಸ್ಕರಿಸಿದ್ದು, ರು. 4000 ಕೋಟಿ ಮಲ್ಯ ತೆಗೆದುಕೊಂಡಿರುವ ಹಣದ ಬಡ್ಡಿಗೂ ಸಾಕಾಗುವುದಿಲ್ಲ ಎಂದು ಗುರುವಾರ ಸ್ಪಷ್ಟನೆ ನೀಡಿದೆ.

ಬ್ಯಾಂಕುಗಳು ನೀಡಿದ್ದ ಸಾಲಗಳಿಗೆ ಪಂಗನಾಮ ಹಾಕಿ ವಿದೇಶಕ್ಕೆ ಹಾರಿದ್ದ ವಿಜಯ್ ಮಲ್ಯ ಅವರು ಬ್ಯಾಂಕು ಗಳು ಮುಂದೆ ತೆಗೆದುಕೊಳ್ಳುವ ಕಾನೂನು ಕ್ರಮಗಳಿಗೆ ಹೆದರಿ ಸಾಲ ಬಾಕಿ ಇತ್ಯರ್ಥದ ಅಂಗವಾಗಿ ರು.4 ಸಾವಿರ ಕೋಟಿ ಪಾವತಿಸುವುದಾಗಿ ನ್ಯಾಯಾಲಯಕ್ಕೆ ತಿಳಿಸಿದ್ದರು. ಈ ವರ್ಷದ ಸೆಪ್ಟೆಂಬರ್ ಹೊತ್ತಿಗೆ ಬ್ಯಾಂಕ್ ಗಳಿಗೆ ರು. 2 ಸಾವಿರ ಕೋಟಿಗಳನ್ನು ಪಾವತಿಸಿ ಉಳಿದ 2 ಸಾವಿರ ಕೋಟಿಯನ್ನು ಷರತ್ತುಗಳಿಗೆ ಅನ್ವಯಿಸಿ ಪಾವತಿ ಮಾಡಲಾಗುತ್ತದೆ ಎಂದು ಹೇಳಿದ್ದರು.

ಮಲ್ಯ ಅವರ ಪ್ರಸ್ತಾವನೆ ಸಂಬಂಧ ಕೆಲವು ದಿನಗಳ ಹಿಂದಷ್ಟೇ ಬ್ಯಾಂಕ್ ಗಳ ಒಕ್ಕೂಟ ಸಭೆಯೊಂದನ್ನು ನಡೆಸಿ ಪ್ರಸ್ತಾವನೆಯನ್ನು ತಿರಸ್ಕರಿಸಲು ತೀರ್ಮಾನಿಸಿದ್ದರು. ಇದರಂತೆ ಇಂದು ಸುಪ್ರೀಂ ನಲ್ಲಿ ನಡೆದ ವಿಚಾರಣೆ ವೇಳೆ ಮಲ್ಯ ಅವರ 4 ಸಾವಿರ ಕೋಟಿ ಪ್ರಸ್ತಾವವನ್ನು ತಿರಸ್ಕರಿಸಿದೆ.

ಅಲ್ಲದೆ, ಮಲ್ಯ ಅವರು ಒಪ್ಪಿಕೊಂಡಿರುವ ರು. 4000 ಕೋಟಿ ಹಣವು ಸಾಲದ ಮೇಲಿರುವ ಬಡ್ಡಿಯ ಹಣಕ್ಕೂ ಸಾಕಾಗುವುದಿಲ್ಲ. ಅದನ್ನು ನೀಡುತ್ತಾರೆಂಬುದುಕ್ಕೆ ಖಚಿತತೆಯೂ ಇಲ್ಲ. ಇನ್ನು ಉಳಿದ 5 ಸಾವಿರ ಕೋಟಿಯನ್ನು ಯಾವಾಗ ನೀಡುತ್ತಾರೆಂಬುದಕ್ಕೆ ಸ್ಪಷ್ಟನೆ ನೀಡಿಲ್ಲ. ಹೀಗಾಗಿ ಮಲ್ಯ ಅವರ ಪ್ರಸ್ತಾವವನ್ನು ತಿರಸ್ಕರಿಸುತ್ತಿದ್ದೇವೆಂದು ಹೇಳಿದೆ.

ಇನ್ನು ಬ್ಯಾಂಕ್ ಗಳ ಪ್ರತಿಕ್ರಿಯೆ ಕೇಳಿದ ಕಿಂಗ್ ಫಿಶರ್ ಕಂಪನಿಯು ಮುಂದಿನ ಪ್ರಸ್ತಾವನೆಗಾಗಿ 2 ವಾರಗಳ ಕಾಲ ಕಾಲಾಕಾಶ ನೀಡುವಂತೆ ಸುಪ್ರೀಂನಲ್ಲಿ ಮನವಿ ಮಾಡಿಕೊಂಡಿದೆ.

ಏ.21 ರೊಳಗಾಗಿ ಆಸ್ತಿ ವಿವರ ಸಲ್ಲಿಸಿ
ಮಲ್ಯ ಪ್ರಸ್ತಾವನೆಯನ್ನು ಬ್ಯಾಂಕುಗಳು ತಿರಸ್ಕರಿಸಿರುವ ಹಿನ್ನೆಲೆಯಲ್ಲಿ ಏ.21 ರೊಳಗಾಗಿ ತಮ್ಮ ಎಲ್ಲಾ ಆಸ್ತಿ ಪಾಸ್ತಿಗಳ ವಿವರವನ್ನು ನ್ಯಾಯಾಲಯಕ್ಕೆ ಸಲ್ಲಿಸುವಂತೆ ಸುಪ್ರೀಂಕೋರ್ಟ್ ಮಲ್ಯಗೆ ಸೂಚನೆ ನೀಡಿದೆ.

ಪ್ರಕರಣ ಸಂಬಂಧ ಇಂದು ವಿಚಾರಣೆ ನಡೆಸಿರುವ ನ್ಯಾಯಾಧೀಶ ಕುರಿಯನ್ ಜೋಸೆಫ್ ಮತ್ತು ರೊಹಿನ್ಟನ್ ಪಳಿ ನಾರಿಮನ್ ಅವರಿದ್ದ ಪೀಠ ಈ ಬಗ್ಗೆ ಸೂಚನೆ ನೀಡಿದ್ದು, ಏ.21 ರೊಳಗಾಗಿ ತಮ್ಮ ಹಾಗೂ ಪತ್ನಿ, ಮಕ್ಕಳ ಹೆಸರಿನಲ್ಲಿರುವ ಎಲ್ಲಾ ರೀತಿಯ ಆಸ್ತಿ ವಿವರವನ್ನು ಸಲ್ಲಿಸುವಂತೆ ಸೂಚನೆ ನೀಡಿದೆ ಎಂದು ತಿಳಿದುಬಂದಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com