ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಹಂದ್ವಾರದ ವಿದ್ಯಾರ್ಥಿನಿಗೆ ಯೋಧ ಲೈಂಗಿಕ ಕಿರುಕುಳ ನೀಡಿದ ಆರೋಪ ಕಣಿವೆ ರಾಜ್ಯದಲ್ಲಿ ಹಿಂಸಾತ್ಮಕ ಪ್ರತಿಭಟನೆ ಕಾರಣವಾಗಿದ್ದು, ಪ್ರಕರಣ ಸಂಬಂಧ ಕಿರುಕುಳಕ್ಕೆ ಒಳಗಾದ ಬಾಲಕಿ ಹಾಗೂ ಆಕೆಯ ಸಂಬಂಧಿಗಳ ಬಂಧನವನ್ನು ಜಮ್ಮು ಮತ್ತು ಕಾಶ್ಮೀರ ಹೈಕೋರ್ಟ್ ಶನಿವಾರ ಪ್ರಶ್ನಿಸಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ 16 ವರ್ಷದ ಬಾಲಕಿ ತಾಯಿ ತೇಜಾ ಬೇಗಂ ಅವರು, ಪೊಲೀಸರು ತನ್ನ ಮಗಳನ್ನು, ಆಕೆಯ ತಂದೆ ಹಾಗೂ ಆಂಟಿಯನ್ನು ಅಕ್ರಮವಾಗಿ ಬಂಧಿಸಿದ್ದು, ಅವರನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂದು ಹೈಕೋರ್ಟ್ ಗೆ ಮನವಿ ಮಾಡಿದ್ದರು.
ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ಎಚ್.ಅತ್ತರ್ ಅವರು, ಈ ಸಂಬಂಧ ಹಂದ್ವಾರ ಪೊಲೀಸ್ ವರಿಷ್ಠಾಧಿಕಾರಿಗೆ ಹಾಗೂ ಸಂಬಂಧಿಸಿದ ಪೊಲೀಸ್ ಠಾಣಾಧಿಕಾರಿಗೆ ನೋಟಿಸ್ ನೀಡಿದ್ದು, ಅಪ್ರಾಪ್ತ ಬಾಲಕಿಯನ್ನು ಯಾವ ಕಾನೂನಿನಡಿ ಬಂಧಿಸಿದ್ದಿರಿ ಎಂಬುದನ್ನು ಕೋರ್ಟ್ ಗೆ ತಿಳಿಸುವಂತೆ ಸೂಚಿಸಿರುವುದಾಗಿ ಅರ್ಜಿದಾರರ ಪರ ವಕೀಲ ಪರ್ವೇಜ್ ಇಮ್ರೊಜ್ ಅವರು ತಿಳಿಸಿದ್ದಾರೆ.
ಬಾಲಕಿಯನ್ನು ಹಂದ್ವಾರ ಮಾಜಿಸ್ಟ್ರೇಟ್ ನ್ಯಾಯಾಧೀಶರ ಮುಂದೆ ಹಾಜರುಪಡಿಸಿ ಬಾಲಕಿಯ ಹೇಳಿಕೆ ದಾಖಲಿಸುವಂತೆ ಹೈಕೋರ್ಟ್ ಪೊಲೀಸರಿಗೆ ಸೂಚಿಸಿ, ವಿಚಾರಣೆಯನ್ನು ಏಪ್ರಿಲ್ 20ಕ್ಕೆ ಮುಂದೂಡಿದೆ ಎಂದು ಅವರು ತಿಳಿಸಿದ್ದಾರೆ.
ಯೋಧ ಬಾಲಕಿಗೆ ಕಿರುಕುಳ ನೀಡಿದ ಪ್ರಕರಣವನ್ನು ಖಂಡಿಸಿ ನಡೆದ 4 ದಿನಗಳ ಹಿಂಸಾತ್ಮಕ ಪ್ರತಿಭಟನೆಯಲ್ಲಿ ಒಟ್ಟು ಐವರು ಮೃತಪಟ್ಟಿದ್ದಾರೆ ಮತ್ತು ಹಲವರು ಗಾಯಗೊಂಡಿದ್ದಾರೆ. ಕೇಂದ್ರ ಸರ್ಕಾರವು ಈದಿನ ಹೆಚ್ಚುವರಿ ಸೇನಾಪಡೆಗಳನ್ನು ಹಿಂಸಾಚಾರ ನಿಯಂತ್ರಣಕ್ಕೆ ಕಳುಹಿಸಿಕೊಡುವುದಾಗಿ ಪ್ರಕಟಿಸಿದೆ.