

ಹೈದರಾಬಾದ್: ಭಾರತ ಚೀನಾದ ಅಭಿವೃದ್ಧಿ ದರವನ್ನು ಹಿಂದಿಕ್ಕಿ ಮುನ್ನಡೆ ಸಾಧಿಸುತ್ತಿದೆ ಎಂದಿರುವ ಕೇಂದ್ರ ಸಚಿವ ಜೆಪಿ ನಡ್ಡಾ, ಕಾಂಗ್ರೆಸ್ ಹಾಗೂ ಎಡಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಕಾಂಗ್ರೆಸ್ ಹಾಗೂ ಎಡಪಕ್ಷಗಳಿಗೆ ದಿಕ್ಕು ತೋಚಂದತಹ ಸ್ಥಿತಿ ನಿರ್ಮಾಣವಾಗಿದ್ದು ಬೌದ್ಧಿಕವಾಗಿ ದಿವಾಳಿಯಾಗಿವೆ ಎಂದು ನಡ್ಡಾ ಲೇವಡಿ ಮಾಡಿದ್ದಾರೆ. ಕಾಂಗ್ರೆಸ್ ಪಕ್ಷ ನಾಯಕನಿಲ್ಲದ ಪಕ್ಷವಾಗಿದೆ. ಎಲ್ಲಾ ಸಾಮರ್ಥ್ಯವನ್ನು ಕಳೆದುಕೊಂಡಿರುವ ಕಾಂಗ್ರೆಸ್ ಸಮರ್ಥ ವಿಪಕ್ಷವಾಗಿ ಕಾರ್ಯನಿರ್ವಹಿಸಲೂ ವಿಫಲವಾಗಿದೆ ಎಂದು ಜೆಪಿ ನಡ್ಡಾ ಆರೋಪಿಸಿದ್ದಾರೆ.
ತೆಲಂಗಾಣದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷರ ಸನ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕಾಂಗ್ರೆಸ್ ನೀರಿನಿಂದ ಹೊರತೆಗೆದ ಮೀನಿನಂತಾಗಿದ್ದರೆ, ಎಡಪಕ್ಷಗಳು ಬೌದ್ಧಿಕವಾಗಿ ದಿವಾಳಿಯಾಗಿದೆ, ಆದರೆ ಬಿಜೆಪಿ ಪ್ರಧಾನಿ ಮೋದಿ ಅವರ ಸಮರ್ಥ ನಾಯಕತ್ವದಲ್ಲಿ ಮುನ್ನಡೆಯುತ್ತಿದೆ ಎಂದು ನಡ್ಡಾ ಹೇಳಿದ್ದಾರೆ.
ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಆಡಳಿತದಲ್ಲಿದ್ದಾಗ ಹಣದುಬ್ಬರ ಎರಡು ಅಂಕಿಯಲ್ಲಿತ್ತು. ಅದನ್ನು ಶೇ.5 ಕ್ಕಿಂತ ಕೆಳಗಿಳಿಸಿದ್ದು ಮೋದಿ ನೇತೃತ್ವದ ಸರ್ಕಾರ, ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಜಿಡಿಪಿ ಬೆಳವಣಿಗೆ ಶೇ.7 .5 ರಷ್ಟಾಗಿದೆ, ದೇಶ ಅಭಿವೃದ್ಧಿ ಪಥದಲ್ಲಿ ಮುನ್ನಡೆಯುತ್ತಿದೆ ಎಂದು ನಡ್ಡಾ ತಿಳಿಸಿದ್ದಾರೆ.