

ನವದೆಹಲಿ: ವಿದೇಶಿ ತಳಿ ಶ್ವಾನಗಳು ಭಾರತದ ಹವಾಮಾನಕ್ಕೆ ಹೊಂದಿಕೊಳ್ಳದಿರುವುದರಿಂದ ಅಂತಹ ಶ್ವಾನಗಳನ್ನು ತಳಿ ಸಂವರ್ಧನೆಗೆ ಆಮದು ಮಾಡಿಕೊಳ್ಳಬಾರದು ಎಂದು ಅನೇಕ ಪ್ರಾಣಿದಯಾ ಸಂಘಟನೆಗಳು ಕಳವಳ ವ್ಯಕ್ತಪಡಿಸಿರುವುದರಿಂದ ಸರ್ಕಾರ ಶ್ವಾನಗಳನ್ನು ಆಮದು ಮಾಡಿಕೊಳ್ಳುವುದಕ್ಕೆ ನಿಷೇಧ ಹೇರಿದೆ.
ವಿದೇಶಿ ವ್ಯಾಪಾರ ಮಹಾ ನಿರ್ದೇಶನಾಲಯ ಈ ಸಂಬಂಧ ಅಧಿಸೂಚನೆ ಹೊರಡಿಸಿದ್ದು, ವಾಣಿಜ್ಯ ಉದ್ದೇಶದ ತಳಿ ಸಂವರ್ಧನೆಗೆ ಶ್ವಾನಗಳನ್ನು ವಿದೇಶಗಳಿಂದ ಆಮದು ಮಾಡಿಕೊಳ್ಳುವುದಕ್ಕೆ ನಿಷೇಧ ಹೇರಲಾಗಿದೆ. ಶ್ವಾನಗಳನ್ನು ಸಂಶೋಧನೆ ಮತ್ತು ರಕ್ಷಣೆ ಉದ್ದೇಶಗಳಿಗೆ ಬಳಸುತ್ತಿದ್ದರೆ ಅದಕ್ಕೆ ನಿಷೇಧವಿರುವುದಿಲ್ಲ.
ತಳಿ ಸಂವರ್ಧನೆಗೆಂದು ಶ್ವಾನಗಳನ್ನು ವಿದೇಶಗಳಿಂದ ಆಮದು ಮಾಡಿಕೊಂಡರೆ ಬೀದಿನಾಯಿಗಳ ಸಂಖ್ಯೆ ಹೆಚ್ಚಾಗುತ್ತದೆ. ಹಾಗಾಗಿ ನಿಷೇಧ ಹೇರಬೇಕೆಂದು ಹ್ಯೂಮನ್ ಸೊಸೈಟಿ ಇಂಟರ್ ನ್ಯಾಷನಲ್ ಮತ್ತು ಪೀಪಲ್ ಫಾರ್ ಅನಿಮಲ್ಸ್ ಸರ್ಕಾರವನ್ನು ಒತ್ತಾಯಿಸಿದ್ದವು.
ಬರ್ನಾರ್ಡ್ಸ್, ಸಿಬರಿಯನ್ ಹಸ್ಕೀಸ್, ಅಲಸ್ಕನ್ ಮಲಮೂಟ್ಸ್ ಮತ್ತು ಇತರ ವಿದೇಶಿ ತಳಿ ನಾಯಿಗಳನ್ನು ತಳಿಗಾರರು ಭಾರತಕ್ಕೆ ಆಮದು ಮಾಡಿಕೊಳ್ಳುತ್ತಿದ್ದರು. ಆದರೆ ಇಲ್ಲಿನ ಹವಾಮಾನ, ಅವುಗಳ ಅಗತ್ಯಗಳನ್ನು ಪೂರೈಸಲು ಸಾಧ್ಯವಾಗುವುದಿಲ್ಲ. ಹಾಗಾಗಿ ನಿಷೇಧ ಹೇರಿದೆ.
ಭಾರತೀಯ ಕಾನೂನು ಆಯೋಗದ ಶಿಫಾರಸ್ಸಿನಂತೆ ಸಾಕುನಾಯಿ ಮಳಿಗೆ ಮತ್ತು ತಳಿಗಾರರ ಕಾನೂನು ಜಾರಿಗೆ ತರಬೇಕೆಂದು ಪ್ರಾಣಿದಯಾ ಸಂಘಟನೆಗಳು ಸರ್ಕಾರವನ್ನು ಒತ್ತಾಯಿಸಿವೆ.