ನವದೆಹಲಿ: ರಿಯೋ ಒಲಿಂಪಿಕ್ಸ್ ನಲ್ಲಿ ಭಾರತಕ್ಕೆ ಕುಸ್ತಿಪಟು ಸಾಕ್ಷಿ ಮಲಿಕ್ ಕಂಚಿನ ಪದಕ ತಂದುಕೊಟ್ಟ ಸಂಭ್ರಮ ಒಂದೆಡೆಯಾದರೆ, ಪದಕದ ಭರವಸೆ ಮೂಡಿಸಿದ್ದ ಕುಸ್ತಿಪಟು ವಿನೇಶ್ ಪೊಗತ್ ಕ್ವಾರ್ಟರ್ ಫೈನಲ್ ನಲ್ಲಿ ಗಾಯಗೊಂಡು ಕಣ್ಣೀರಿನೊಂದಿಗೆ ರಣಕಣದಿಂದ ನಿರ್ಗಮಿಸಿದ್ದಾರೆ.
48 ಕೆಜಿ ಫ್ರೀಸ್ಟೈಲ್ ಕುಸ್ತಿಯ ಕ್ವಾರ್ಟರ್ ಫೈನಲ್ ನಲ್ಲಿ ಚೀನಾದ ಸನ್ ಯನಾನ್ ಉತ್ತಮವಾಗಿ ಆಡುತ್ತಿದ್ದ ವಿನೇಶ್ ಪೊಗತ್ 1-0 ಅಂಕದಿಂದ ಮುನ್ನಡೆ ಸಾಧಿಸಿದ್ದರು. ನಂತರ ಯನಾನ್ ವಿನೇಶ್ ಎರಡು ಕಾಲುಗಳನ್ನು ಹಿಡಿದಾಗ ತೀವ್ರವಾದ ಮಂಡಿ ನೋವು ಕಾಣಿಸಿಕೊಂಡಿದ್ದರಿಂದ ಕಣದಿಂದ ನಿರ್ಗಮಿಸಬೇಕಾಗಿ ಬಂತು. ಸದ್ಯ ಚಿಕಿತ್ಸೆ ಪಡೆಯುತ್ತಿರುವ ಅವರು ಚೇತರಿಸಿಕೊಳ್ಳಲು ಒಂದು ವಾರ ಬೇಕಾಗಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಗಾಯಗೊಂಡು ನೋವಿನೊಂದಿಗೆ ರಣಕಣದಿಂದ ನಿರ್ಗಮಿಸಿದ ವಿನೇಶ್ ಪೊಗತ್ ಟ್ವೀಟ್ ನಲ್ಲಿ ತಮ್ಮ ದುಖಃವನ್ನು ಹಂಚಿಕೊಂಡಿದ್ದಾರೆ. ನಾನು ಚೆನ್ನಾಗಿದ್ದೇನೆ ಎಂದು ನಿಮಗೆ ಹೇಳಿದರೆ ಅದು ನನಗೆ ನಾನೇ ಸುಳ್ಳು ಹೇಳಿಕೊಂಡಂತಾಗುತ್ತದೆ. ಈ ಕ್ಷಣಕ್ಕೆ ನಾನು ದೈಹಿಕವಾಗಿ ಮತ್ತು ಮಾನಸಿಕವಾಗಿ ಘಾಸಿಗೊಂಡಿದ್ದೇನೆ ಎಂದು ಟ್ವೀಟಿಸಿದ್ದರು. ಇದನ್ನು ಗಮನಿಸಿದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಟ್ವೀಟರ್ ನಲ್ಲಿ ಸಾಂತ್ವನದ ಮಾತುಗಳನ್ನು ಹೇಳಿದ್ದಾರೆ.
ಸುಷ್ಮಾ ಸ್ವರಾಜ್ ವಿನೇಶ್ ಟ್ವೀಟನ್ನು ಮರುಟ್ವೀಟ್ ಮಾಡಿ ನೀನು ನಮ್ಮ ಪುತ್ರಿ. ಇಡೀ ಭಾರತ ನಿನ್ನ ಕುಟುಂಬ. ನಿನಗೆ ಯಾವುದೇ ನೆರವು ಬೇಕಿದ್ದರೂ ಕೇಳು ಎಂದು ಟ್ವೀಟಿಸಿದ್ದಾರೆ.