ಲಕ್ನೋ: ಸಮಾಜವನ್ನು ಒಡೆಯುವ ಮೂಲಕ ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಕ್ಷ, ಬಿಜೆಪಿ ಮತ್ತು ಬಿಎಸ್ ಪಿ ಗಳು ಮಹಾತ್ಮಾ ಗಾಂಧಿಯವರ ಪರಂಪರೆಯನ್ನು ನಾಶ ಮಾಡುತ್ತಿವೆ ಎಂದು ಉತ್ತರ ಪ್ರದೇಶ ರಾಜ್ಯದ ಕಾಂಗ್ರೆಸ್ ಉಸ್ತುವಾರಿ ಗುಲಾಂ ನಬಿ ಆಜಾದ್ ಆರೋಪಿಸಿದ್ದಾರೆ. ಗಾಂಧೀಜಿಯವರ ಏಕತೆ ತತ್ವದಡಿ ಮುಂದಿನ ವರ್ಷ ಈ ರಾಜ್ಯದಲ್ಲಿ ತಮ್ಮ ಪಕ್ಷ ಚುನಾವಣೆಯನ್ನು ಎದುರಿಸಲಿದೆ ಎಂದು ಹೇಳಿದರು.
ಕಳೆದ 27 ವರ್ಷಗಳಲ್ಲಿ ಎಸ್ಪಿ, ಬಿಜೆಪಿ ಮತ್ತು ಬಿಎಸ್ ಪಿ ಪಕ್ಷಗಳಿಗೆ ಉತ್ತರ ಪ್ರದೇಶದಲ್ಲಿ ಸರ್ಕಾರ ರಚಿಸಲು ಅನೇಕ ಅವಕಾಶಗಳು ಸಿಕ್ಕಿವೆ. ಅದಕ್ಕೆ ಪ್ರತಿಯಾಗಿ ಇವರು ಜನರಿಗೆ ಕೊಟ್ಟದ್ದು, ಗೂಂಡಾಗಿರಿ ಸಂಸ್ಕೃತಿ, ಸ್ವಜನ ಪಕ್ಷಪಾತ, ಭ್ರಷ್ಟಾಚಾರ ಮತ್ತು ಸಮಾಜವನ್ನು ಒಡೆಯುವ ಮನೋವೃತ್ತಿ ಎಂದು ಹೇಳಿದರು.
ಧರ್ಮ ಮತ್ತು ಜಾತಿ ಹೆಸರಿನಲ್ಲಿ ಈ ಪಕ್ಷಗಳು ಸಮಾಜವನ್ನು ಒಡೆಯುತ್ತಿದ್ದು, ಆ ಮೂಲಕ ಜನರಿಂದ ಮತಗಳನ್ನು ಪಡೆದು ಸರ್ಕಾರ ರಚಿಸುತ್ತವೆ. ಅವರು ಮಹಾತ್ಮಾ ಗಾಂಧೀಜಿ, ಇಂದಿರಾ ಗಾಂಧಿ ಮತ್ತು ರಾಜೀವ್ ಗಾಂಧಿಯವರು ಹಾಕಿಕೊಟ್ಟ ತತ್ವ, ಆದರ್ಶ, ಏಕತೆಗಳನ್ನು ನಾಶಪಡಿಸುತ್ತಿದ್ದಾರೆ ಎಂದರು.
ಶೀಲಾ ದೀಕ್ಷಿತ್ ಅವರನ್ನು ಉತ್ತರ ಪ್ರದೇಶದ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ನೇಮಿಸಿರುವ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಕಳೆದ 15 ವರ್ಷಗಳಲ್ಲಿ ಶೀಲಾ ದೀಕ್ಷಿತ್ ಅವರು ದೆಹಲಿಯನ್ನು ಮಾದರಿ ರಾಜ್ಯವನ್ನಾಗಿ ಮಾಡಿದ್ದಾರೆ. ದೆಹಲಿಯ ತರ ಉತ್ತರ ಪ್ರದೇಶ ಕೂಡ ವಿಜೃಂಭಿಸುವುದನ್ನು ನೋಡಲು ನಾವು ಬಯಸುತ್ತೇವೆ. ಹಾಗಾಗಿ ಅವರಿಗೆ ಈ ಜವಾಬ್ದಾರಿ ನೀಡಲಾಗಿದೆ ಎಂದು ಗುಲಾಂ ನಬಿ ಆಜಾದ್ ತಿಳಿಸಿದರು.