

ಭುವನೇಶ್ವರ್: ವ್ಯಕ್ತಿಯೊಬ್ಬ ಅನಾರೋಗ್ಯಕ್ಕೀಡಾಗಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ ತನ್ನ ಪತ್ನಿಯನ್ನು ಹೆಗಲ ಮೇಲೆ ಹೊತ್ತು 10 ಕಿ.ಮೀ ನಡೆದು ಸಾಗಿದ ಘಟನೆ ಒಡಿಶಾದಲ್ಲಿ ನಡೆದಿದೆ.
ಒಡಿಶಾದ ಕಲಹಂಡಿಯಲ್ಲಿ ಈ ಘಟನೆ ನಡೆದಿದ್ದು, ಕ್ಷಯ ರೋಗದಿಂದ ಬಳಲಿ ಸರ್ಕಾರಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ ತನ್ನ ಪತ್ನಿಯನ್ನು ಸ್ವಗ್ರಾಮಕ್ಕೆ ಸಾಗಿಸಲು ಹಣವಿಲ್ಲದೇ ಪರದಾಡಿದ್ದ ಪತಿಯೊಬ್ಬ ಅಂತಿಮವಾಗಿ ತನ್ನ ಹೆಗಲ ಮೇಲೆ ಹೊತ್ತು ಸಾಗಿದ್ದಾನೆ. ಮಾರ್ಗ ಮಧ್ಯೆ ಸ್ಥಳೀಯ ಮಾಧ್ಯಮಗಳನ್ನು ಇದನ್ನು ಗಮನಿಸಿ ವಿಚಾರಿಸಿದಾಗ ವಿಷಯ ಬಹಿರಂಗವಾಗಿದೆ.
ದನ ಮಾಜ್ಹಿ ಎಂಬ 42 ವರ್ಷದ ವ್ಯಕ್ತಿ ಕ್ಷಯ ರೋಗದಿಂದ ಬಳಲುತ್ತಿದ್ದ ತನ್ನ ಪತ್ನಿ 37 ವರ್ಷದ ಅಮಂಗ್ ಡೀ ಎಂಬಾಕೆಯನ್ನು ಕಲಹಂಡಿಯ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಿದ್ದಾನೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ಆಕೆ ಸಾವನ್ನಪ್ಪಿದ್ದಾಳೆ. ತನ್ನ ಬಳಿ ಇದ್ದ ಅಲ್ಪಹಣವನ್ನು ಪತ್ನಿಯ ಚಿಕಿತ್ಸೆ ಖರ್ಚು ಮಾಡಿದ್ದ ದನಾ ಮಾಜ್ಹಿ, ಪತ್ನಿಯ ಮೃತದೇಹವನ್ನು ಗ್ರಾಮಕ್ಕೆ ಸಾಗಿಸಲು ಪರದಾಡಿದ್ದಾನೆ. ಮೃತ ದೇಹ ಸಾಗಣೆಗೆ ಆಸ್ಪತ್ರೆಯನ್ನು ಮಾಜ್ಹಿ ಸಂಪರ್ಕಿಸಿದ್ದು, ಹೆಣ ಸಾಗಿಸಲೂ ಕೂಡ ತನ್ನ ಬಳಿ ಹಣವಿಲ್ಲ ಎಂದು ಅಳಲು ತೋಡಿಕೊಂಡಿದ್ದಾನೆ.
ಮಾಜ್ಹಿ ಗ್ರಾಮ ಸರ್ಕಾರಿ ಆಸ್ಪತ್ರೆಯಿಂದ ಸುಮಾರು 60 ಕಿ.ಮೀ ದೂರದಲ್ಲಿದ್ದು, ಈ ವಿಚಾರವನ್ನೂ ಆಸ್ಪತ್ರೆ ಸಿಬ್ಬಂದಿಗಳ ಬಳಿ ಹೇಳಿಕೊಂಡಿದ್ದಾನೆ. ಆದರೆ ಮಾಜ್ಹಿ ಮನವಿಯನ್ನು ಆಸ್ಪತ್ರೆ ಸಿಬ್ಬಂದಿ ತಿರಸ್ಕರಿಸಿದ್ದಾರೆ. ಇದರಿಂದ ಬೇರೆ ದಾರಿಯಿಲ್ಲದೇ ಒಂದು ಬಟ್ಟೆಯಲ್ಲಿ ತನ್ನ ಪತ್ನಿಯ ಶವವನ್ನು ಸುತ್ತಿಕೊಂಡ ಮಾಜ್ಹಿ, ಅದನ್ನು ತನ್ನ ಹೆಗಲ ಮೇಲೇರಿಸಿಕೊಂಡು ತನ್ನ 12 ವರ್ಷದ ಪುಟ್ಟ ಮಗಳನ್ನು ಕರೆದುಕೊಂಡು ನಡೆದುಕೊಂಡೇ ಸಾಗಿದ್ದಾನೆ. ಹೀಗೆ ಶವವನ್ನು ಹೊತ್ತು ಸುಮಾರು 10 ಕಿ.ಮೀ ನಡೆದ ಬಳಿಕ ಮಾರ್ಗ ಮಧ್ಯೆ ಸ್ಥಳೀಯ ಮಾಧ್ಯಮದವರು ಇದನ್ನು ಕಂಡು ಮಾಜ್ಹಿಯನ್ನು ಪ್ರಶ್ನಿಸಿದ್ದಾರೆ. ನಡೆದ ವಿಚಾರವನ್ನೆಲ್ಲಾ ಪತ್ರಕರ್ತ ಮುಂದೆ ಮಾಜ್ಹಿ ಹೇಳಿಕೊಂಡಿದ್ದು, ಬಳಿಕ ಪತ್ರಕರ್ತರೇ ಸ್ಥಳೀಯ ಸರ್ಕಾರಿ ಆಸ್ಪತ್ರೆಯನ್ನು ಸಂಪರ್ಕಿಸಿ ಆ್ಯಂಬುಲೆನ್ಸ್ ವ್ಯವಸ್ಥೆ ಮಾಡಿಕೊಟ್ಟಿದ್ದಾರೆ.
ಬಡವರಿಗೆ ಪ್ರಯೋಜನವಾಗಲಿ ಎಂದು ಕಳೆದ ಫೆಬ್ರವರಿಯಲ್ಲಿ ಸರ್ಕಾರ ಮಹಾ ಪ್ರಯಾಣ ಎಂಬ ಯೋಜನೆ ಆರಂಭಿಸಿದ್ದು, ಬಡ ಕುಟುಂಬಸ್ಥರು ಈ ಯೋಜನೆ ಮೂಲಕ ಉಚಿತವಾಗಿ ಶವಗಳನ್ನು ರವಾನಿಸಬಹುದಾಗಿದೆ. ಆದರೆ ಈ ವಿಚಾರ ತಿಳಿದಿದ್ದೂ, ಮಾಜ್ಹಿ ವಿಚಾರದಲ್ಲಿ ಕಲಹಂಡಿ ಸರ್ಕಾರಿ ಆಸ್ಪತ್ರೆ ನಡೆದುಕೊಂಡ ಪರಿ ಇದೀಗ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಇನ್ನು ಸ್ಥಳೀಯ ಸಂಸದ ಕಲಿಕೇಶ್ ಸಿಂಗ್ ಡಿಯೋ ಅವರು ಘಟನೆಯನ್ನು ಖಂಡಿಸಿದ್ದು, ಘಟನೆಯ ತನಿಖೆ ನಡೆಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.