

ನವದೆಹಲಿ: ನೆರೆ ರಾಷ್ಟ್ರವಾಗಿರುವ ಪಾಕಿಸ್ತಾನ ಕಾಶ್ಮೀರ ವಿಚಾರ ಕುರಿತಂತೆ ಭಾರತದೊಂದಿಗೆ ಶತ್ರುವಂತೆ ವರ್ತಿಸಲು ಆರಂಭಿಸಿದೆ ಎಂದು ಜೆಡಿಯು ಭಾನುವಾರ ಹೇಳಿದೆ.
ಈ ಕುರಿತಂತೆ ಮಾತನಾಡಿರುವ ಜೆಡಿಯು ನಾಯಕ ಕೆ.ಸಿ. ತ್ಯಾಗಿ ಅವರು, ಕಾಶ್ಮೀರ ವಿಚಾರ ಕುರಿತಂತೆ ಭಾರತದೊಂದಿಗೆ ಪಾಕಿಸ್ತಾನ ಶತ್ರುವಿನಂತೆ ವರ್ತಿಸುತ್ತಿದ್ದು, ಹೀಗಾಗಿಯೇ 22 ಸಂಸದರ ತಂಡ ರಚಿಸಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಧ್ವನಿ ಎತ್ತುವಂತೆ ಮಾಡುತ್ತಿದೆ. ಪ್ರಧಾನಮಂತ್ರಿಯಾಗಲಿ ಅಥವಾ ಹಣಕಾಸು ಸಚಿವರಾಗಲಿ ವಿಶ್ವಸಂಸ್ಥೆಯತ್ತ ಹೋಗಬೇಕಿದೆ ಮತ್ತು ಸರ್ವ ಪಕ್ಷ ಸಭೆ ನಡೆಸಿ ಕಾಶ್ಮೀರ ವಿಚಾರ ಕುರಿತಂತೆ ಮಾತನಾಡಬೇಕಿದೆ ಎಂದು ಹೇಳಿದ್ದಾರೆ.
ಕಾಶ್ಮೀರ ಹೋರಾಟ ಕುರಿತಂತೆ ಮಾತನಾಡಿದ್ದ ಪಾಕಿಸ್ತಾನ ಪ್ರಧಾನಮಂತ್ರಿ ನವಾಜ್ ಷರೀಫ್ ಅವರು, ಕಾಶ್ಮೀರ ವಿವಾದ ಕುರಿತ ಹೋರಾಟಕ್ಕಾಗಿ ನಾನು 22 ಸಂಸದರ ವಿಶೇಷ ತಂಡವನ್ನು ರಚಿಸಿದ್ದು, ಈ ಸಂಸದರನ್ನು ಪ್ರಪಂಚದ ವಿವಿಧ ಭಾಗಗಳಿಗೆ ಕಳುಹಿಸಲು ನಿರ್ಧರಿಸಿದ್ದೇನೆ. ಈ ವಿಶೇಷ ಪ್ರತಿನಿಧಿಗಳು ಪಾಕಿಸ್ತಾನ ಜನರ ಜೀವಾಳವಾಗಿದ್ದಾರೆ. ಇವರಿಗೆ ಸರ್ಕಾರ ಹಾಗೂ ಜನರ ಬೆಂಬಲ ಇದೆ. ಆ ಕಾರಣಕ್ಕಾಗಿ ನಾವು ಕಾಶ್ಮೀರ ವಿಚಾರವಾಗಿ ವಿಶ್ವದಾದ್ಯಂತ ಹೋರಾಟ ಮುಂದುವರಿಸಲಿದ್ದೇವೆ ಎಂದು ಹೇಳಿದ್ದರು.