

ನವದೆಹಲಿ: ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯವರ ರೋಡ್ ಶೋಗೆ ಬಿಜೆಪಿ ಟಾಂಗ್ ನೀಡಿದ್ದು, ಬೀದಿಗಿಳಿದಿರುವ ಕಾಂಗ್ರೆಸ್ ಮುಂದೆ ಬೀದಿಯಲ್ಲಿಯೇ ನಿಲ್ಲಲಿದೆ ಎಂದು ಮಂಗಳವಾರ ಹೇಳಿದೆ.
ಈ ಕುರಿತಂತೆ ಮಾತನಾಡಿರುವ ಬಿಜೆಪಿ ನಾಯಕ ಶಹ್ನಾವಾಜ್ ಹುಸೇನ್ ಅವರು, ಕಾಂಗ್ರೆಸ್ ಎಷ್ಟು ಬೇಕಾದರೂ ರೋಡ್ ಶೋಗಳಲ್ಲಿ ಭಾಗಿಯಾಗಲಿ. ಆದರೆ, ಅವರು 2017ರ ಉತ್ತರ ಪ್ರದೇಶದಲ್ಲಿ ನಡೆಯುವ ಚುನಾವಣೆಯಲ್ಲಿ ಏನನ್ನೂ ಸಾಧಿಸಲು ಸಾಧ್ಯವಾಗುವುದಿಲ್ಲ. ಕಾಂಗ್ರೆಸ್ ಪಕ್ಷದವರು ಎಷ್ಟು ರೋಡ್ ಶೋಗಳನ್ನು ಮಾಡುತ್ತಿದ್ದಾರೆಂಬುದು ವಿಷಯವಲ್ಲ. ಪ್ರಸ್ತುತ ಕಾಂಗ್ರೆಸ್ಸಿಗರು ರೋಡಿನಲ್ಲಿದ್ದಾರೆ. ಮುಂದೆಯೂ ಅಲ್ಲಿಯೇ ಇರುತ್ತಾರೆ. ಎಂದಿಗೂ ವಿಧಾನಸಭೆ ಮೆಟ್ಟಿಲು ಹತ್ತಲು ಸಾಧ್ಯವಾಗುವುದಿಲ್ಲ ಎಂದು ಹೇಳಿದ್ದಾರೆ.
ಉತ್ತರಪ್ರದೇಶದಲ್ಲಿ ಕಾಂಗ್ರೆಸ್ ಒಮ್ಮೆ ರಾಹುಲ್ ಗಾಂಧಿಯವರು ಉತ್ತರಪ್ರದೇಶಕ್ಕೆ ಬಂದು, ಹೊಸ ಹೊಸ ಕಾರ್ಯಕ್ರಮಗಳನ್ನು ಆರಂಭಿಸಿದ್ದರು. ಅಂದು ಕಾಂಗ್ರೆಸ್ ಪರಿಸ್ಥಿತಿ ತೀರಾ ಕೆಟ್ಟದಾಗಿತ್ತು. ಉತ್ತರಪ್ರದೇಶದಲ್ಲಿ ಎರಡಂಕಿ ಸೀಟು ಪಡೆಯಲು ಅವರಿಗೆ ಸಾಧ್ಯವಿರಲಿಲ್ಲ ಎಂದು ತಿಳಿಸಿದ್ದಾರೆ.
ಇನ್ನು ಕೆಲವೇ ತಿಂಗಳಿನಲ್ಲಿ ಉತ್ತರಪ್ರದೇಶದಲ್ಲಿ ಚುನಾವಣೆ ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯವರು ಸೆಪ್ಟೆಂಬರ್ 6 ರಿಂದ ಉತ್ತರಪ್ರದೇಶದಲ್ಲಿ ರೋಡ್ ಶೋ ನಡೆಸಲು ತೀರ್ಮಾನಿಸಿದ್ದಾರೆ. ಡಿಯೋರಿಯಾದ ಜಿಲ್ಲೆಯಿಂದ ದೆಹಲಿ ವರೆಗೆ 2,500 ಕಿ.ಮೀ ರೋಡ್ ಶೋ ನಡೆಸಲಿದ್ದಾರೆ.