

ಹೈದರಾಬಾದ್: ತೆಲಂಗಾಣ ವಿಧಾನಸಭೆಯಲ್ಲಿ ತೀವ್ರ ಗದ್ದಲವುಂಟು ಮಾಡಿ, ನಿಲುವಳಿ ಸೂಚನೆ ಮಂಡನೆ ವೇಳೆ ಅಡ್ಡಿಪಡಿಸುತ್ತಿದ್ದ ಕಾರಣಕ್ಕೆ 11 ಮಂದಿ ವಿರೋಧ ಪಕ್ಷಗಳ ಶಾಸಕರನ್ನು ಸದನದಿಂದ ಸ್ಪೀಕರ್ ಅಮಾನತುಗೊಳಿಸಿದ್ದಾರೆಂದು ತಿಳಿದುಬಂದಿದೆ.
ವಿರೋಧ ಪಕ್ಷಗಳ ಶಾಸಕರು ಪಕ್ಷಾಂತರಗೊಳ್ಳುತ್ತಿರುವ ಕುರಿತಂತೆ ಚರ್ಚೆ ನಡೆಸುವಂತೆ ವಿರೋಧ ಪಕ್ಷಗಳು ಸದನದ ಬಾವಿಗಿಳಿದು ತೆಲಂಗಾಣ ರಾಜ್ಯದ ಆಡಳಿತಾರೂಢ ಸರ್ಕಾರ ತೆಲಂಗಾಣ ರಾಷ್ಟ್ರ ಸಮಿತಿ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದವು. ಈ ಹಿನ್ನೆಲೆಯಲ್ಲಿ ಸ್ಪೀಕರ್ 9 ಮಂದಿ ಕಾಂಗ್ರೆಸ್ ಶಾಸಕರು ಹಾಗೂ ಇಬ್ಬರು ಟಿಡಿಪಿ ಪಕ್ಷದ ಶಾಸಕರನ್ನು ಸದನದಿಂದ ಅಮಾನತು ಮಾಡಿದ್ದಾರೆಂದು ಹೇಳಲಾಗುತ್ತಿದೆ.
ಅಮಾನತು ಕುರಿತಂತೆ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್ ಶಾಸಕ ಎಂ. ಭಟ್ಟಿ ವಿಕ್ರಮಾರ್ಕ ಅವರು, ವಿರೋಧ ಪಕ್ಷಗಳ ಶಾಸಕರನ್ನು ಆಡಳಿತಾರೂಢ ಸರ್ಕಾರ ಸೇರ್ಪಡೆಗೊಳಿಸಿಕೊಳ್ಳುವುದು ಪ್ರಜಾಪ್ರಭುತ್ವ ತತ್ತ್ವಗಳಿಗೆ ವಿರುದ್ಧವಾದದ್ದು ಎಂದು ಹೇಳಿದ್ದಾರೆ.
ಟಿಆರ್ ಎಸ್ ಪಕ್ಷದ ಶಾಸಕಿ ಜಿ. ಸುನೀತಾ ಮಾತನಾಡಿ, ಸದನ ಸರಿಯಾಗಿ ಕೆಲಸ ಮಾಡಲು ಕಾಂಗ್ರೆಸ್ ನಾಯಕರು ಬಿಡುತ್ತಿಲ್ಲ. ರಾಜ್ಯದಲ್ಲಿ ಉತ್ತಮ ಕೆಲಸಗಳಾಗುವುದು ಅವರಿಗೆ ಇಷ್ಟವಿಲ್ಲ. ಹೀಗಾಗಿ ಸದನದಲ್ಲಿ ಚರ್ಚೆ ನಡೆಸಲು ಬಿಡುತ್ತಿಲ್ಲ ಎಂದು ಹೇಳಿದ್ದಾರೆ.
ವಿರೋಧ ಪಕ್ಷಗಳು ಆಗ್ರಹಿಸುತ್ತಿರುವ ವಿಚಾರವನ್ನು ಪ್ರಶ್ನಾವಳಿ ಸಂದರ್ಭದಲ್ಲಿ ಚರ್ಚೆ ನಡೆಸಲಾಗುತ್ತದೆ ಎಂದು ತಿಳಿಸಲಾಗಿತ್ತು. ಇದರ ನಡುವೆಯೂ ಕಾಂಗ್ರೆಸ್ ನಾಯಕರು ಪ್ರತಿಭಟನೆ ನಡೆಸುತ್ತಿದ್ದರು. ಕಾಂಗ್ರೆಸ್ ಹಾಗೂ ಟಿಡಿಪಿ ಪಕ್ಷಗಳು ದ್ವಿಮುಖ ಧೋರಣೆನ್ನು ಅಳವಡಿಸಿಕೊಂಡಿವೆ ಎಂದು ತಿಳಿಸಿದ್ದಾರೆ.