

ನವದೆಹಲಿ: ಹೊಸ 2000 ರು.ಮುಖಬೆಲೆಯ ನೋಟಿನಲ್ಲಿ ನ್ಯಾನೋ ಜಿಪಿಎಸ್ ಚಿಪ್ ಇದೆ ಎಂಬ ವಾದ ಹಲವು ದಿನಗಳಿಂದಲೂ ಕೇಳಿಬರುತ್ತಿತ್ತು. ಆದರೆ ಸ್ವತಃ ಆರ್ ಬಿಐ ಅಧಿಕಾರಿಗಳೇ ನೋಟಿನಲ್ಲಿ ನ್ಯಾನೋ ಚಿಪ್ ಇಲ್ಲ ಎಂದು ಹೇಳುವ ಮೂಲಕ ವದಂತಿಗೆ ತೆರೆ ಎಳೆದಿದ್ದರು. ಆದರೆ ಇದೀಗ ನೋಟಿನಲ್ಲಿ ಇರುವ ಚಿಪ್ ತೆಗೆಯುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ವೈರಲ್ ಆಗಿದೆ.
ಸಾಮಾಜಿಕ ಜಾಲಾತಾಣಗಳಲ್ಲಿ ಹರಿದಾಡುತ್ತಿರುವ ಸುದ್ದಿಗಳಂತೆ ಹೊಸ 2000 ರು. ನೋಟಿನಲ್ಲಿ ನ್ಯಾನೋ ಜಿಪಿಎಸ್ ಚಿಪ್ ಇದ್ದು, ಇದೇ ಕಾರಣಕ್ಕೆ ಕಾಳಧನಿಕರು ಪದೇ ಪದೇ ಸಿಕ್ಕಿ ಬೀಳುತ್ತಿದ್ದಾರೆ ಎನ್ನುವ ವಾದಗಳು ವ್ಯಾಪಕವಾಗಿ ಹರಿದಾಡುತ್ತಿದೆ. ಇದಕ್ಕೆ ಇಂಬು ನೀಡುವಂತೆ ನೋಟಿನಲ್ಲಿರುವ ಚಿಪ್ ಅನ್ನು ತೆಗೆಯುತ್ತಿರುವ ವಿಡಿಯೋವೊಂದು ಯೂಟ್ಯೂಬ್ ನಲ್ಲಿ ಅಪ್ಲೋಡ್ ಆಗಿದ್ದು, ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಅರುಣ್ಣ್ಆರ್ ಬೊಪ್ಚೆ ಎಂಬ ಯೂಟ್ಯೂಬ್ ಖಾತೆಯಲ್ಲಿ ಈ ವಿಡಿಯೋ ಆಪ್ಲೋಡ್ ಆಗಿದ್ದು, ವಿಡಿಯೋದಲ್ಲಿ ವ್ಯಕ್ತಿಯೋರ್ವ ನೋಟಿನ ಮಧ್ಯಭಾಗವನ್ನು ಬ್ಲೇಡಿನಿಂದ ಕತ್ತರಿಸಿ ಅದರೊಳಗಿಂದ ಪಾರದರ್ಶಕವಾಗಿರುವ ಚಿಪ್ ಅನ್ನು ಹೊರ ತೆಗೆಯುತ್ತಾನೆ. ಇದನ್ನೇ ನ್ಯಾನೋ ಜಿಪಿಎಸ್ ಚಿಪ್ ಎಂದು ಹೇಳಲಾಗುತ್ತಿದ್ದು, ಇದರಿಂದಲೇ ಕಾಳಧನಿಕರು ಸಿಕ್ಕಿಬೀಳುತ್ತಿದ್ದಾರೆ ಎಂಬ ವಾದವೂ ಕೂಡ ಹರಿದಾಡುತ್ತಿದೆ.
ಮತ್ತೊಂದೆಡೆ ಯೂಟ್ಯೂಬ್ ವಿಡಿಯೋವನ್ನೇ ಪ್ರಶ್ನಿಸಿರುವ ಕೆಲವರು ಇದೊಂದು ಫೇಕ್ ವಿಡಿಯೋ ಆಗಿದ್ದು, ನೋಟನ್ನು ಕತ್ತರಿಸುವ ವ್ಯಕ್ತಿ ತನ್ನ ಕೈ ಚಳಕದಿಂದ ವೀಕ್ಷಕರಿಗೆ ತಿಳಿಯದಂತೆ ಪಾರದರ್ಶಕ ಚಿಪ್ ಅನ್ನು ಆದರೊಳಗೆ ಅಡಗಿಸಿ ಬಳಕ ಅದನ್ನು ಹೊರತೆಗೆದು ಅದನ್ನೇ ನ್ಯಾನೋ ಚಿಪ್ ಎಂದು ಪ್ರದರ್ಶನ ಮಾಡಿದ್ದಾನೆ ಎಂದು ಆರೋಪಿಸಿದ್ದಾರೆ.
ಒಟ್ಟಾರೆ ಹೊಸ ನೋಟಿನಲ್ಲಿ ನ್ಯಾನೋ ಜಿಪಿಎಸ್ ಚಿಪ್ ಇದೆಯೋ ಇಲ್ಲವೋ ತಿಳಿದಿಲ್ಲ. ಆದರೆ ಈ ಬಗ್ಗೆ ಹರಿದಾಡುತ್ತಿರುವ ಸುದ್ದಿ ಮತ್ತು ವಿಡಿಯೋ ಮಾತ್ರ ವ್ಯಾಪಕ ಚರ್ಚೆಗೆ ಕಾರಣವಾಗಿದೆ.