

ಕೊಲ್ಕೊತಾ: 25 ಕೋಟಿ ಮೌಲ್ಯದ ಹಳೇಯ ನೋಟುಗಳನ್ನು ಹೊಸ ನೋಟುಗಳಿಗೆ ಬದಲಾಯಿಸಲು ಯತ್ನಿಸುತ್ತಿದ್ದ ಪರಸ್ಮಲ್ ಲೋಧಾ ಎಂಬ ಉದ್ಯಮಿಯನ್ನು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಬಂಧಿಸಿದ್ದಾರೆ. ಆತನಿಂದ 500 ಹಾಗೂ 1000 ರು ಮೌಲ್ಯದ ಹಳೇಯ ನೋಟುಗಳನ್ನು ವಶಪಡಿಸಿಕೊಳ್ಳಲಾಗಿದೆ.
ನವೆಂಬರ್ 8 ರಂದು 500 ಹಾಗೂ 1000 ರು ಮೌಲ್ಯದ ನೋಟುಗಳನ್ನು ಕೇಂದ್ರ ಸರ್ಕಾರ ನಿಷೇಧ ಮಾಡಿದ ಮೇಲೆ ಡಿಸೆಂಬರ್ 1 ರಿಂದ ಜಾರಿ ನಿರ್ದೇಶನಾಲಯ ಹವಾಲಾ ಹಣ ನಿರ್ವಾಹಕರ ಮೇಲೆ ದಾಳಿ ನಡೆಸಿ ಕೋಟ್ಯಾಂತರ ರು ಮೌಲ್ಯದ ಕಪ್ಪು ಹಣವನ್ನು ವಶ ಪಡಿಸಿಕೊಂಡಿದ್ದಾರೆ.
ಗುಪ್ತಚರ ಇಲಾಖೆ ಮಾಹಿತಿ ಆಧಾರದ ಮೇಲೆ ದೆಹಲಿ, ಮುಂಬಯಿ,ಕೊಲ್ಕೋತಾ, ಹೈದರಾಬಾದ್, ಬೆಂಗಳೂರು , ಅಹಮದಾಬಾದ್ ಹಾಗೂ ಚೆನ್ನೈ ಸೇರಿದಂತೆ ಹಲವು ನಗರಗಳಲ್ಲಿ ಜಾರಿ ನಿರ್ದೇಶನಾಲಯ ಅಧಿಕಾರಿಗಳು ದಾಳಿ ನಡೆಸಿ ಕಪ್ಪು ಹಣವನ್ನು ಬಿಳಿ ಮಾಡಲು ಯತ್ನಿಸುತ್ತಿದ್ದವರನ್ನು ಬಂಧಿಸಿ, ಅವರಿಂದ ಹಣವನ್ನು ಜಪ್ತಿ ಮಾಡಿದ್ದಾರೆ.