

ನವದೆಹಲಿ: ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯವರಲ್ಲಿ ಪ್ರಬುದ್ಧತೆಯ ಕೊರತೆ ಎದ್ದು ಕಾಣುತ್ತಿದ್ದು, ಭ್ರಷ್ಟರನ್ನು ರಕ್ಷಿಸುವ ಯತ್ನ ಮಾಡುತ್ತಿದ್ದಾರೆಂದು ಬಿಜೆಪಿ ಮಂಗಳವಾರ ಹೇಳಿಕೊಂಡಿದೆ.
ದುಬಾರಿ ನೋಟಿನ ಮೇಲೆ ನಿಷೇಧ ಹೇರಿಕೆಯ ನಿರ್ಧಾರದ ವಿರುದ್ಧ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಮತ್ತು ತೃಣಮೂಲ ಕಾಂಗ್ರೆಸ್ ಪಕ್ಷದ ಮುಖ್ಯಸ್ಥೆ ಮಮತಾ ಬ್ಯಾನರ್ಜಿಯವರ ನೇತೃತ್ವದಲ್ಲಿ ವಿರೋಧ ಪಕ್ಷಗಳ ಒಗ್ಗಟು ಪ್ರದರ್ಶಿಸುವ ಯತ್ನ ನಡೆಸಿ, ಮೋದಿಯವನ್ನು ಗುರಿ ಮಾಡಿರುವುದಕ್ಕೆ ಬಿಜೆಪಿ ಕಿಡಿಕಾರಿದೆ. ವಿರೋಧ ಪಕ್ಷಗಳ ಒಗ್ಗಟ್ಟು ಪ್ರದರ್ಶಿಸುವ ಯತ್ನ ವಿಫಲವಾಗಿದ್ದು, ಕೇವಲ ಭ್ರಷ್ಟರನ್ನು ಬೆಂಬಲಿಸುವ ಯತ್ನ ಇದಾಗಿದೆ ಎಂದು ಟೀಕಿಸಿದೆ.
ಈ ಕುರಿತಂತೆ ಮಾತನಾಡಿರುವ ಕೇಂದ್ರ ಸಚಿವ ರವಿ ಶಂಕರ್ ಪ್ರಸಾದ್ ಅವರು, ರಾಹುಲ್ ಗಾಂಧಿಯವರು ಇತರೆ ಪಕ್ಷಗಳ ಬೆಂಬಲವನ್ನು ಕೇಳುತ್ತಿದ್ದಾರೆ. ಇದು ಕಾಂಗ್ರೆಸ್ ನ ಸೋಲಾಗಿದ್ದು, ಬಿಜೆಪಿ ಗೆಲವು ಸಾಧಿಸಿದೆ. ಭಾರತೀಯ ರಾಜಕೀಯದಲ್ಲಿ ಎನ್ ಡಿಎ ಪಕ್ಷ ಕೇಂದ್ರದಲ್ಲಿದೆ ಎಂದು ಹೇಳಿದ್ದಾರೆ.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರಿಗೆ ಪ್ರಬುದ್ಧತೆಯ ಕೊರೆತೆ ಎದ್ದುಕಾಣುತ್ತಿದ್ದು, ಭ್ರಷ್ಟರನ್ನು ರಕ್ಷಿಸುವ ಯತ್ನ ನಡೆಸುತ್ತಿದ್ದಾರೆ. ಹೀಗಾಗಿ ವಿದೇಶದ ಸ್ವಿಸ್ ಬ್ಯಾಂಕ್ ನಲ್ಲಿ ಹಣವನ್ನು ಹೂಡಿಕೆ ಮಾಡಿರುವ ಕಾಳಧನಿಕರ ಹೆಸರನ್ನು ಬಹಿರಂಗ ಪಡಿಸುವಂತೆ ಆಗ್ರಹಿಸುತ್ತಿದ್ದಾರೆ.
ಕಾಳಧನಿಕರ ವಿರುದ್ಧ ಚಾರ್ಜ್ ಶೀಟ್ ಸಲ್ಲಿಕೆ ಮಾಡದೆಯೇ ಅವರ ಹೆಸರುಗಳನ್ನು ನಾವು ಬಹಿರಂಗ ಪಡಿಸಿದ್ದೇ ಆದರೆ, ಸ್ವಿಸ್ ಬ್ಯಾಂಕ್ ನ ಅಧಿಕಾರಿಗಳು ಮುಂದೆ ನಮ್ಮೊಂದಿಗೆ ಸಹಕಾರ ನೀಡುವುದಿಲ್ಲ. ಹೀಗಾಗಿಯೇ ನಾವು ಹೆಸರುಗಳನ್ನು ಬಹಿರಂಗಪಡಿಸುತ್ತಿಲ್ಲ. ಈ ರೀತಿ ಆಗುವುದು ರಾಹುಲ್ ಗಾಂಧಿಯವರಿಗೆ ಬೇಕೆ...? ಎಂದು ಪ್ರಶ್ನಿಸಿದ್ದಾರೆ.