

ವಿಶಾಖಪಟ್ಟಣ; ಹೈದರಾಬಾದ್ ನಲ್ಲಿ ಭೀಕರ ಅಪಘಾತ ಸಂಭವಿಸಿದ್ದು, ವೇಗವಾಗಿ ಬರುತ್ತಿದ್ದ ಕಾರೊಂದು ರಸ್ತೆ ವಿಭಜಕಕ್ಕೆ ಬಲವಾಗಿ ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಐವರು ಸ್ಥಳದಲ್ಲಿಯೇ ದುರ್ಮರಣವನ್ನಪ್ಪಿರುವ ಘಟನೆ ವಿಶಾಖಪಟ್ಟಣಂ ಜಿಲ್ಲೆಯ ಗೋಕುಲಪುಡುವಿನ ರಾಷ್ಟ್ರೀಯ ಹೆದ್ದಾರಿ-16ರಲ್ಲಿ ಬುಧವಾರ ತಡರಾತ್ರಿ ನಡೆದಿದೆ.
ಹೈದರಾಬಾದ್ ಮೂಲದವರಾಗಿದ್ದ 12 ಮಂದಿ ಕಾರಿನಲ್ಲಿ ವಿಶಾಖಪಟ್ಟಣಂನಿಂದ ಅನ್ನಾವರಂ ಹೋಗುತ್ತಿದ್ದರು. ಅನ್ನಾವರಂ ದೇವಸ್ಥಾನಕ್ಕೆ ತೆರಳಿ ದರ್ಶನ ಪಡೆದ ಬಳಿಕ ಹೈದರಾಬಾದ್ ಮರಳೆ ಬರುತ್ತಿದ್ದರು. ಈ ವೇಳೆ ಘಟನೆ ಸಂಭವಿಸಿದೆ ಎಂದು ತಿಳಿದುಬಂದಿದೆ.
ಕಳೆದ ರಾತ್ರಿ ರಾಷ್ಟ್ರೀಯ ಹೆದ್ದಾರಿ-16 ಬಳಿ ಬರುತ್ತಿದ್ದಂತೆ ಕಾರಿನಲ್ಲಿದ್ದ ಬಲಭಾಗದ ಟೈಯರ್ ಸ್ಫೋಟಗೊಂಡಿದೆ. ಈ ವೇಳೆ ಕಾರಿನ ಮೇಲಿನ ನಿಯಂತ್ರಣವನ್ನು ಚಾಲಕ ಕಳೆದುಕೊಂಡಿದ್ದಾನೆ. ನಂತರ ರಸ್ತೆಯ ವಿಭಜಕಕ್ಕೆ ಕಾರು ಬಲವಾಗಿ ಡಿಕ್ಕಿ ಹೊಡೆದಿದೆ ಎಂದು ಪೊಲೀಸರು ಹೇಳಿದ್ದಾರೆ.
ಘಟನೆ ವೇಳೆ ಐವರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ನಾಲ್ವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಇಬ್ಬರ ಸ್ಥಿತಿ ಗಂಭೀರವಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.