

ಚೆನ್ನೈ: ತಮಿಳುನಾಡು ಮಾಜಿ ಸಿಎಂ ಜಯಲಲಿತಾ ಅವರ ಸಾವಿನ ಕುರಿತು ಸ್ವತಃ ಮದ್ರಾಸ್ ಹೈಕೋರ್ಟ್ ಅನುಮಾನ ವ್ಯಕ್ತಪಡಿಸಿದ್ದು, ಜಯಲಲಿತಾ ಅವರ ಮೃತದೇಹದ ಮರಣೋತ್ತರ ಪರೀಕ್ಷೆಯಾಗಬಾರದೇಕೆ ಎಂದು ಪ್ರಶ್ನಿಸಿದೆ.
ತಮಿಳುನಾಡು ಮಾಜಿ ಸಿಎಂ ಜಯಲಲಿತಾ ಅವರ ಸಾವಿನ ಕುರಿತಂತೆ ಹಲವು ಅನುಮಾನಗಳು ವ್ಯಕ್ತವಾಗುತ್ತಿರುವ ಬೆನ್ನಲ್ಲೇ ಮದ್ರಾಸ್ ಹೈಕೋರ್ಟ್ ನ್ಯಾಯಮೂರ್ತಿ ವೈದ್ಯಲಿಂಗಮ್ ಅವರೂ ಸಹ ಜಯಾ ಸಾವಿನ ಕುರಿತಂತೆ ಅನುಮಾನ ವ್ಯಕ್ತಪಡಿಸಿದ್ದಾರೆ. ಎಐಎಡಿಎಂಕೆ ಕಾರ್ಯಕರ್ತ ಜೋಸೆಫ್ ಎಂಬುವವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಕೈಗೆತ್ತಿಕೊಂಡ ನ್ಯಾಯಮೂರ್ತಿ ವೈದ್ಯಲಿಂಗಮ್ ಅವರು, ಜಯಲಲಿತಾ ಅವರ ಸಾವಿನ ಕುರಿತಂತೆ ಹಲವು ಅನುಮಾನಗಳು ವ್ಯಕ್ತವಾಗುತ್ತಿವೆ. ಜಯಲಲಿತಾ ಅವರು ಆಸ್ಪತ್ರೆಯಲ್ಲಿದ್ದಾಗ ಪಥ್ಯಾಹಾರವನ್ನು ಸ್ವೀಕರಿಸುತ್ತಿದ್ದರು ಎಂದು ಹೇಳಲಾಗಿದೆ.
ಇನ್ನು ಜಯಲಲಿತಾ ಅವರ ಸಾವಿನ ಸಂಬಂಧ ಮಾಧ್ಯಮಗಳಲ್ಲಿ ಮೂಡಿಬಂದಿರುವ ವರದಿಗಳಿಂದಾಗಿ ಜನರಲ್ಲಿ ಹಲವು ಶಂಕೆಗಳು ಮೂಡಿವೆ. ವೈಯುಕ್ತಿಕವಾಗಿ ನನಗೂ ಸಾಕಷ್ಟು ಅನುಮಾನಗಳಿವೆ. ಜಯಲಲಿತಾ ಅವರು ಆಸ್ಪತ್ರೆಯಲ್ಲಿದ್ದಾಗ ಪಥ್ಯಾಹಾರವನ್ನು ಸ್ವೀಕರಿಸುತ್ತಿದ್ದರು ಎಂದು ಹೇಳಲಾಗುತ್ತಿದೆ. ಕನಿಷ್ಠ ಪಕ್ಷ ಅವರ ಸಾವಿನ ಬಳಿಕವಾದರೂ ನಿಜಾಂಶ ಹೊರಬರಬೇಕಿದೆ.
ಚೆನ್ನೈನ ಆಪೋಲೋ ಆಸ್ಪತ್ರೆಯಲ್ಲಿ ದೆಹಲಿಯ ಏಮ್ಸ್ ಆಸ್ಪತ್ರೆ ವೈದ್ಯರು ಜಯಾ ಅವರ ಆರೋಗ್ಯದ ಮೇಲ್ವಿಚಾರಣೆ ನಡೆಸುತ್ತಿದ್ದರು. ಆಗಿದ್ದಾಂಗ್ಗೇ ಜಯಾ ಅವರ ಆರೋಗ್ಯ ಕುರಿತ ವರದಿಯನ್ನು ತಿಳಿಸುತ್ತಿದ್ದರು. ಹೀಗಿದ್ದೂ ಅವರ ಸಾವು ಹಲವು ಅನುಮಾನಗಳಿಗೆ ಕಾರಣವಾಗಿದೆ. ಈ ಎಲ್ಲ ಅನುಮಾನಗಳ ಪರಿಹಾರಕ್ಕೆ ಜಯಲಲಿತಾ ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಏಕೆ ಒಳಪಡಿಸಬಾರದು ಎಂದು ನ್ಯಾಯಮೂರ್ತಿ ವೈದ್ಯಲಿಂಗಮ್ ಪ್ರಶ್ನಿಸಿದ್ದಾರೆ.
ಆದರೆ ಮರು ಮರಣೋತ್ತರ ಪರೀಕ್ಷೆ ನಿರ್ಣಯವನ್ನು ಮಾತ್ರ ಮುಖ್ಯನ್ಯಾಯಮೂರ್ತಿ ಅವರೇ ಕೈಗೊಳ್ಳಲಿ ಎಂದೂ ಅರ್ಜಿಯ ವಿಚಾರಣೆ ಮುಖ್ಯ ನ್ಯಾಯಮೂರ್ತಿಗಳ ವಿವೇಚನೆಗೆ ಬಿಟ್ಟು ಸಿಜೆ ಪೀಠಕ್ಕೆ ಅರ್ಜಿಯನ್ನು ವರ್ಗಾವಣೆ ಮಾಡಿದ್ದಾರೆ. ಅಂತೆಯೇ ಪ್ರಕರಣದ ಮುಂದಿನ ವಿಚಾರಣೆಯನ್ನು ಜನವರಿ 9ಕ್ಕೆ ಮುಂದೂಡಿ, ಜಯಲಲಿತಾ ಅವರ ಸಾವಿನ ಕುರಿತಂತೆ ರಹಸ್ಯ ಮುಂದುವರೆಸುತ್ತಿರುವ ತಮಿಳುನಾಡು ಸರ್ಕಾರ ಹಾಗೂ ಕೇಂದ್ರ ಸರ್ಕಾರಗಳ ವಿರುದ್ಧ ಹೈಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಈ ಬಗ್ಗೆ ವಿವರ ನೀಡುವಂತೆ ಎರಡೂ ಸರ್ಕಾರಗಳಿಗೆ ನೋಟಿಸ್ ಜಾರಿ ಮಾಡಿದ್ದಾರೆ.
ಜ್ವರ ಮತ್ತು ದೇಹದ ನಿರ್ಜಲೀಕರಣದಿಂದಾಗಿ ಚೆನ್ನೈನ ಅಪೋಲೋ ಆಸ್ಪತ್ರೆಗೆ ದಾಖಲಾಗಿದ್ದ ಜಯಲಲಿತಾ ಅವರು 75 ದಿನಗಳ ಬಳಿಕ ಅಂದರೆ ಡಿಸೆಂಬರ್ 5ರಂದು ಸಾವನ್ನಪ್ಪಿದ್ದರು.