

ನವದೆಹಲಿ: ಸಿಎಂ ಸಿದ್ದರಾಮಯ್ಯ ವಿರುದ್ಧ ಕಾಂಗ್ರೆಸ್ ಹೈಕಮಾಂಡ್ ನಾಯಕರು ಅಸಮಾಧಾನಗೊಂಡಿದ್ದು, ಸಿದ್ದರಾಮಯ್ಯ ತಮ್ಮ ಸ್ಥಾನ ಕಳೆದುಕೊಳ್ಳಲಿದ್ದಾರೆಯೇ ಎಂಬ ಊಹಾಪೋಹಗಳಿಗೆ ಮತ್ತಷ್ಟು ಪುಷ್ಟಿ ದೊರೆತಿದೆ. ಇದಕ್ಕೆ ಕಾರಣವಾಗಿರುವುದು ಕಾಂಗ್ರೆಸ್ ನಾಯಕ ಬಿಕೆ ಹರಿಪ್ರಸಾದ್ ಅವರ ಸಿದ್ದರಾಮಯ್ಯ ಕುರಿತಾದ ಹೇಳಿಕೆ.
ವಿಧಾನಸಭೆಗೆ ನಡೆದ ಉಪಚುನಾವಣೆ ಹಾಗೂ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಕಳಪೆ ಸಾಧನೆ ಬಗ್ಗೆ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ವರಿಗೆ ಸಿದ್ದರಾಮಯ್ಯ ವರದಿ ನೀಡುವುದಕ್ಕೂ ಮುನ್ನ ಸಿದ್ದರಾಮಯ್ಯ ಅವರ ವಿರುದ್ಧ ಕಾಂಗ್ರೆಸ್ ಹಿರಿಯ ನಾಯಕ ಬಿಕೆ ಹರಿಪ್ರಸಾದ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
" ಸಿದ್ದರಾಮಯ್ಯ ಪಕ್ಷದ ಹಿರಿಯ ನಾಯಕರನ್ನು ನಿರ್ಲಕ್ಷಿಸುತ್ತಿದ್ದಾರೆ. ಅಷ್ಟೇ ಅಲ್ಲದೇ ಸಿದ್ದರಾಮಯ್ಯ ಅವರ ನಾಯಕತ್ವದಲ್ಲಿ ಪಕ್ಷ ಬೆಳವಣಿಗೆಯಾಗುತ್ತಿಲ್ಲ. ವಿಧಾನಸಭಾ ಉಪಚುನಾವಣೆ, ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಚುನಾವಣೆಯ ಫಲಿತಾಂಶ ಇದನ್ನು ಸ್ಪಷ್ಟಪಡಿಸುತ್ತವೆ" ಎಂದು ಬಿಕೆ ಹರಿಪ್ರಸಾದ್ ಹೇಳಿದ್ದಾರೆ.
ಹೆಬ್ಬಾಳ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ರೆಹಮಾನ್ ಷರೀಫ್ ಸೋಲುವುದಕ್ಕೂ ಸಿದ್ದರಾಮಯ್ಯ ಅವರನ್ನೇ ಹೊಣೆಗಾರರನ್ನಾಗಿ ಮಾಡಿರುವ ಹರಿಪ್ರಸಾದ್ ಸಿದ್ದರಾಮಯ್ಯ ಇನ್ನೂ ಕಾಂಗ್ರೆಸ್ ಸಂಸ್ಕೃತಿ ಅರ್ಥ ಮಾಡಿಕೊಂಡಿಲ್ಲ ಎನಿಸುತ್ತಿದೆ. ಅರ್ಥ ಮಾಡಿಕೊಂಡಿದ್ದರೆ ಅವರು ಹೈಕಮಾಂಡ್ ಒಪ್ಪಿಗೆ ಪಡೆಯದೇ ಉಪಚುನಾವಣೆಗೆ ತಮ್ಮದೇ ಆದ ಅಭ್ಯರ್ಥಿಯನ್ನು ಆಯ್ಕೆ ಮಾಡುತ್ತಿರಲಿಲ್ಲ ಎಂದು ಹರಿಪ್ರಸಾದ್ ಹೇಳಿದ್ದಾರೆ. ಅಲ್ಲದೇ ಸರ್ಕಾರವನ್ನು ಸರಿಯಾದ ಹಾಡಿಗೆ ತರಲು ಶೀಘ್ರವೇ ದೊಡ್ಡ ಮಟ್ಟದಲ್ಲಿ ಸಂಪುಟ ಪುನಾರಚನೆಯಾಗಬೇಕಿದೆ ಎಂದು ಹರಿಪ್ರಸಾದ್ ಅಭಿಪ್ರಾಯಪಟ್ಟಿದ್ದಾರೆ.