

ನವದೆಹಲಿ: ಕೇಂದ್ರ ಸರ್ಕಾರದ ಮಹಾತ್ವಾಕಾಂಕ್ಷಿ ಅಭಿಯಾನವಾದ ಸ್ಟಾರ್ಟ್ ಅಪ್ ಅಭಿಯಾನದ ಉದ್ಘಾಟನಾ ಕಾರ್ಯಕ್ರಮಕ್ಕೆ ಹಣಕಾಸು ಸಚಿವ ಅರುಣ್ ಜೇಟ್ಲಿ ಶನಿವಾರ ಬೆಳಗ್ಗೆ ಚಾಲನೆ ನೀಡಿದರು. ದೇಶದ ಉತ್ಸಾಹಿ ಯುವ ಉದ್ಯಮಿಶೀಲರನ್ನು ಪ್ರೋತ್ಸಾಹಿಸುವ ಕಾರ್ಯಕ್ರಮ ಇದಾಗಿದ್ದು, ಅನೇಕ ಕಂಪೆನಿಗಳ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗಳು ಮತ್ತು ಉನ್ನತ ಸ್ಟಾರ್ಟ್ ಅಪ್ ಕಂಪೆನಿಗಳ ಸ್ಥಾಪಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಜೇಟ್ಲಿ ಅವರು, ಯುವ ಉದ್ಯಮಶೀಲತೆಯನ್ನು ಅಭಿವೃದ್ಧಿಪಡಿಸಿ ಪೋಷಿಸುವ ಸ್ಟಾರ್ಟ್ ಅಪ್ ಇಂಡಿಯಾ ಯೋಜನೆಯಡಿ ತೆರಿಗೆ ಉತ್ತೇಜನವನ್ನು ಹೊಂದಿದ್ದು, ಸರ್ಕಾರ ಕಂಪೆನಿಯ ವಹಿವಾಟುಗಳಲ್ಲಿ ಮಧ್ಯಪ್ರವೇಶಿಸುವುದಿಲ್ಲ ಎಂದು ಹೇಳಿದ್ದಾರೆ. ಅವರ ಭಾಷಣದ ಸಾರಾಂಶಗಳು ಹೀಗೆ ಇವೆ-
-ಭಾರತದ ವ್ಯಾಪಾರ ಉದ್ದಿಮೆಗಳಲ್ಲಿ ಇಂದು ಮಹತ್ವದ ದಿನ.
- ಉದ್ಯಮ ವಲಯದ ಮೂಲ ಸಂಪ್ರದಾಯವನ್ನು ಸ್ಟಾರ್ಟ್ ಅಪ್ ಇಂಡಿಯಾ ಬದಲಾಯಿಸುತ್ತದೆ.
-ಇಂದಿನ ಯುವಜನತೆಗೆ ಸಾಕಷ್ಟು ಉದ್ಯೋಗ ಸೃಷ್ಟಿಸುವ ಸಾಮರ್ಥ್ಯ ಸರ್ಕಾರಕ್ಕಿಲ್ಲ.
-ಭಾರತ 1991ರಲ್ಲಿ ಲೈಸೆನ್ಸ್ ರಾಜ್ ನಿಯಮವನ್ನು ತೋರಿಕೆಗೆ ಮಾತ್ರ ಮುರಿದಿತ್ತು.
-ವಿಶ್ವದ ಆರ್ಥಿಕ ಮಟ್ಟ ಕುಸಿಯುತ್ತಿದೆ.
- ವಿಶ್ವದ ಆರ್ಥಿಕ ಕುಸಿತದ ಸಂದರ್ಭದಲ್ಲಿ ಕೂಡ ಭಾರತ ಆರ್ಥಿಕವಾಗಿ ಪ್ರಾಬಲ್ಯ ಹೊಂದಿದೆ.
-ಉದ್ಯಮಶೀಲತೆಯಲ್ಲಿ ರಾಜ್ಯಗಳ ಪಾತ್ರವನ್ನು ಮೊಟಕುಗೊಳಿಸುವುದು.
-ಇತ್ತೀಚೆಗಷ್ಟೇ ಆರಂಭಗೊಂಡ ಹಾಗೂ ಮೂರು ವರ್ಷದೊಳಗಿನ ಕಂಪೆನಿಗಳಿಗೆ ಸ್ಟಾರ್ಟ್ ಅಪ್ಸ್ ಅಥವಾ ಸ್ಟಾರ್ಟ್‌ಅಪ್ ಕಂಪೆನಿ ಎಂದು ಕರೆಯಲಾಗುತ್ತದೆ. ನೂತನ ಸಂಶೋಧನೆಗಳೊಂದಿಗೆ ಪ್ರಾರಂಭವಾಗುವ ಇಂಥ ಕಂಪೆನಿಗಳನ್ನು ನಿಧಾನಗತಿಯಲ್ಲಾದರೂ ಅಭಿವೃದ್ಧಿಪಡಿಸಿ ಯಶಸ್ಸಿನ ಹಾದಿಯಲ್ಲಿ ಕರೆದೊಯ್ಯಲು ಸಾಕಷ್ಟು ಅವಕಾಶವಿರುತ್ತದೆ. ಹೀಗಾಗಿ ಇಂಥ ಸ್ಟಾರ್ಟ್‌ಅಪ್ ಕಂಪೆನಿಗಳಲ್ಲಿ ಬಂಡವಾಳ ತೊಡಗಿಸಲು ಹಲವು ಹೂಡಿಕೆದಾರರು ಮುಂದೆ ಬರುತ್ತಾರೆ. ಪುಟ್ಟ ಕಂಪೆನಿಗಳ ಈ ಲೋಕದಲ್ಲಿ ಮಾರುಕಟ್ಟೆ ವಿಸ್ತರಿಸುವ ಅವಕಾಶವೂ ಹೆಚ್ಚೇ ಇದೆ.
ಸ್ಟಾರ್ಟ್ ಅಪ್ಸ್ ಗೆ ಹೊಸ ತೆರಿಗೆ ಪದ್ಧತಿ: ಹೊಸ ತೆರಿಗೆ ವಿಧಾನವನ್ನು ಸ್ಟಾರ್ಟ್ ಅಪ್ಸ್ ಗೆ ಜಾರಿಗೆ ತರುವುದಾಗಿ ಹಣಕಾಸು ಸಚಿವರ ಘೋಷಣೆ
- ಕಾರ್ಯಾಂಗದ ಆದೇಶದ ಮೂಲಕ ಹೊಸ ತೆರಿಗೆ ಘೋಷಣೆ. ಅವುಗಳಲ್ಲಿ ಕೆಲವು ಬಜೆಟ್ ನಲ್ಲಿ ಮಂಡನೆ.
ಸ್ಟಾರ್ಟ್ ಅಪ್ ನಿಯಮದಡಿ ಕಂಪೆನಿಗಳಿಗೆ ಹೆಚ್ಚು ಸ್ವಾತಂತ್ರ್ಯ.
- ಕೇಂದ್ರ ಸರ್ಕಾರ ಸ್ಟಾರ್ಟ್ ಅಪ್ ಇಂಡಿಯಾ ಯೋಜನೆಯಡಿ ಎಸ್ಸಿ/ಎಸ್ಟಿ ಗುಂಪಿನವರಿಗೆ ಮತ್ತು ಮಹಿಳೆಯರಿಗೆ ಸಾಲ ಸೌಲಭ್ಯ ನೀಡುತ್ತದೆ.