

ಶ್ರೀನಗರ: ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ಉಗ್ರರು- ಸೇನೆ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಇಬ್ಬರು ಗೆರಿಲ್ಲಾ ಪ್ರತ್ಯೇಕತಾವಾದಿಗಳನ್ನು ಹತ್ಯೆ ಮಾಡಲಾಗಿದೆ. ಗುಂಡಿನ ಚಕಮಕಿಯಲ್ಲಿ ಓರ್ವ ನಾಗರಿಕನಿಗೆ ಗಾಯಗಳಾಗಿದ್ದಾರೆ ಮತ್ತೋರ್ವ ನಾಗರಿಕ ಗುಂಡೇಟಿನಿಂದ ಮೃತಪಟ್ಟಿದ್ದಾನೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಹತ್ಯೆಯಾದ ರಿಯಾಜ್ ನಾಯ್ಕ್ ಲತೀಫ್ ದರ್ ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆಯ ಉಗ್ರರೆಂದು ಗುರುತಿಸಲಾಗಿದೆ. ಗುಂಡೇಟೀಗೆ ಗುರಿಯಾದ ನಾಗರಿಕನನ್ನು ಪರ್ವೇಜ್ ಅಹ್ಮದ್ ಎಂದು ಗುರುತಿಸಲಾಗಿದೆ. ಸೇನಾ ಪಡೆ ಹಾರಿಸಿದ ಗುಂಡಿಗೆ ಗುರಿಯಾದ ನಾಗರಿಕರನ್ನು ತಕ್ಷಣವೇ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಈ ಪೈಕಿ ಓರ್ವ ನಾಗರಿಕ ಮೃತಪಟ್ಟಿದ್ದಾನೆ.
ಪುಲ್ವಾಮಾ ಜಿಲ್ಲೆಯ ಮನೆಯೊಂದನ್ನು ರಕ್ಷಣಾ ಬಂಕರ್ ನನ್ನಾಗಿ ಉಗ್ರರು ಬಳಸಿಕೊಂಡಿದ್ದರು. ಈ ಮಾಹಿತಿಯನ್ನು ಪಡೆದು ಸೇನಾಪಡೆ ಗುಂಡಿನ ದಾಳಿ ನಡೆಸಿದೆ. ಉಗ್ರರು- ಸೇನೆ ನಡುವಿನ ಗುಂಡಿನ ಕಾಳಗದಲ್ಲಿ ಜನಸಾಮಾನ್ಯರಿಗೆ ಗುಂಡೇಟು ತಗುಲಿರುವುದಕ್ಕೆ ಸ್ಥಳೀಯರು ಪ್ರತಿಭಟನೆ ನಡೆಸಿದ್ದಾರೆ.