ನವದೆಹಲಿ: ಭಕ್ತರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟುಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟ ಸಲ್ಮಾನ್ ಖಾನ್ ಹಾಗೂ ಶಾರುಖ್ ಖಾನ್ ವಿರುದ್ಧ ಕೈಗೊಂಡ ಕ್ರಮದ ಬಗ್ಗೆ ವರದಿ ನೀಡುವಂತೆ ದೆಹಲಿ ಕೋರ್ಟ್ ಶುಕ್ರವಾರ ದೆಹಲಿ ಪೊಲೀಸರಿಗೆ ಸೂಚಿಸಿದೆ.
ಬಿಗ್ ಬಾಸ್ ಸೀಸನ್ 9 ಚಿತ್ರೀಕರಣದ ವೇಳೆ ಶೂ ಕಳಚದೇ ಕಾಳಿ ದೇವಾಲಯದ ಸೆಟ್ ಅನ್ನು ಪ್ರವೇಶಿಸುವ ಮೂಲಕ ಶಾರುಖ್ ಖಾನ್, ಸಲ್ಮಾನ್ ಖಾನ್ ಮತ್ತ ಟಿವಿ ತಂಡದ ಸದಸ್ಯರು ಭಕ್ತರ ಮನಸ್ಸಿಗೆ ಘಾಸಿ ಉಂಟು ಮಾಡಿದ್ದಾರೆ ಎಂದು ಆರೋಪಿಸಿ ಗೌರವ್ ಗುಲತಿ ಎಂಬುವವರು ನ್ಯಾಯಾಲಯಕ್ಕೆ ದೂರು ಸಲ್ಲಿಸಿದ್ದರು.
ಇಂದು ದೂರಿನ ವಿಚಾರಣೆ ನಡೆಸಿದ ಹೆಚ್ಚುವರಿ ಮುಖ್ಯ ಮೆಟ್ರೋಪೊಲಿಟನ್ ಮ್ಯಾಜಿಸ್ಟ್ರೇಟ್ ವಿ.ಕೆ.ಗೌತಮ್ ಅವರು, ಆರೋಪಿಗಳ ವಿರುದ್ಧ ತೆಗೆದುಕೊಂಡ ಕ್ರಮದ ಬಗ್ಗೆ ವರದಿ ಸಲ್ಲಿಸುವಂತೆ ಸೂಚಿಸಿ, ಪ್ರಕರಣದ ವಿಚಾರಣೆಯನ್ನು ಫೆಬ್ರುವರಿ 12ಕ್ಕೆ ಮುಂದೂಡಿದ್ದಾರೆ.