

ಶ್ರೀನಗರ: ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆ ಕಮಾಂಡರ್ ಬುರ್ಹಾನ್ ಮುಜಾಫರ್ ವಾನಿ ಹತ್ಯೆ ಖಂಡಿಸಿ ನಡೆದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ್ದು ಕಾಶ್ಮೀರ ಕಣಿವೆಯ ಹಲವು ಪ್ರದೇಶಗಳಲ್ಲಿ ಕರ್ಫ್ಯೂ ಜಾರಿ ಮಾಡಲಾಗಿದೆ.
ಹಿಂಸಾಚಾರ ತೀವ್ರಗೊಳ್ಳುತ್ತಿದ್ದಂತೆ ಕಾಶ್ಮೀರದಲ್ಲಿ ಮೊಬೈಲ್ ಇಂಟರ್ ನೆಟ್ ಸೇವೆಯನ್ನು ಸ್ಧಗಿತಗೊಳಿಸಲಾಗಿದೆ. ಇನ್ನು ಪುಲ್ವಾಮಾ, ಅನಂತನಾಗ್, ಶೋಪಿಯಾನ್, ಪುಲ್ಗಾಂವ್ ಮತ್ತು ಸೋಪೋರೆಯಲ್ಲಿ ಕರ್ಫ್ಯೂ ವಿಧಿಸಲಾಗಿದ್ದು, ಪರಿಸ್ಥಿತಿಯನ್ನು ಹತೋಟಿಗೆ ತರಲು ಭಾರತೀಯ ಸೇನೆಯನ್ನು ನಿಯೋಜಿಸಲಾಗಿದೆ.
ನಿನ್ನೆ ಬುರ್ಹಾನ್ ವಾನಿಯ ಅಂತ್ಯಸಂಸ್ಕಾರ ಮುಗಿದ ಮೇಲೆ ಉದ್ರಿಕ್ತರ ಗುಂಪು ಪೊಲೀಸ್ ಠಾಣೆ ಹಾಗೂ ಬಿಜೆಪಿ ಕಚೇರಿಗಳ ಮೇಲೆ ದಾಳಿ ಮಾಡಿದರು. ಈ ವೇಳೆ ಸಂಘರ್ಷದಲ್ಲಿ 11 ಮಂದಿ ಪ್ರತಿಭಟನಾಕಾರರು ಸಾವನ್ನಪ್ಪಿದ್ದು, 125ಕ್ಕೂ ಹೆಚ್ಚು ಜನ ಹಾಗೂ ಭದ್ರತಾ ಸಿಬ್ಬಂದಿಗೂ ಗಾಯಗಳಾಗಿವೆ.
21 ವರ್ಷದ ಬುರ್ಹಾನ್ ಮುಜಾಫರ್ ವಾನಿ ಮತ್ತು ಆತನ ಇಬ್ಬರು ಸಹಚರರನ್ನು ದಕ್ಷಿಣ ಕಾಶ್ಮೀರದ ಅನಂತನಾಗ್ ಜಿಲ್ಲೆಯಲ್ಲಿ ನಡೆದ ಎನ್ ಕೌಂಟರ್ ನಲ್ಲಿ ಯೋಧರು ಹತ್ಯೆ ಮಾಡಿದ್ದರು.