ಸಿಯಾಚಿನ್ ನಲ್ಲಿ ಪಾತಾಳಕ್ಕೆ ಕುಸಿದ ತಾಪಮಾನ; ಕ್ಯಾಂಪ್ ಸ್ಥಳಾಂತರಕ್ಕೆ ಸೈನಿಕರ ಚಿಂತನೆ

ವಿಶ್ವದ ಅತಿ ಎತ್ತರದ ಮತ್ತು ಅತ್ಯಂತ ಅಪಾಯಕಾರಿ ಸಮರ ಭೂಮಿ ಸಿಯಾಚಿನ್ ನಲ್ಲಿ ತಾಪಮಾನ ತೀವ್ರ ಕುಸಿದ ಪರಿಣಾಮ ಭಾರತೀಯ ಸೈನಿಕರು ಸುರಕ್ಷಿತ ಪ್ರದೇಶಗಳತ್ತ ಕ್ಯಾಂಪ್ ಬದಲಾವಣೆ ಮಾಡಿಕೊಳ್ಳುವಂತೆ ಸೂಚನೆ ನೀಡಲಾಗಿದೆ.
ಸಿಯಾಚಿನ್ ಯುದ್ಧ ಭೂಮಿ (ಸಂಗ್ರಹ ಚಿತ್ರ)
ಸಿಯಾಚಿನ್ ಯುದ್ಧ ಭೂಮಿ (ಸಂಗ್ರಹ ಚಿತ್ರ)
Updated on: 

ಸಿಯಾಚಿನ್: ವಿಶ್ವದ ಅತಿ ಎತ್ತರದ ಮತ್ತು ಅತ್ಯಂತ ಅಪಾಯಕಾರಿ ಸಮರ ಭೂಮಿ ಸಿಯಾಚಿನ್ ನಲ್ಲಿ ತಾಪಮಾನ ತೀವ್ರ ಕುಸಿದ ಪರಿಣಾಮ ಭಾರತೀಯ ಸೈನಿಕರು ಸುರಕ್ಷಿತ ಪ್ರದೇಶಗಳತ್ತ  ಕ್ಯಾಂಪ್ ಬದಲಾವಣೆ ಮಾಡಿಕೊಳ್ಳುವಂತೆ ಸೂಚನೆ ನೀಡಲಾಗಿದೆ.

ಸೇನಾ ಮೂಲಗಳ ಪ್ರಕಾರ ಈ ಹಿಂದೆಂದಿಗಿಂತಲೂ ಇತ್ತೀಚಿನ ದಿನಗಳಲ್ಲಿ ಸಿಯಾಚಿನ್ ತಾಪಮಾನ ಭಾರಿ ಪ್ರಮಾಣದಲ್ಲಿ ಕುಸಿತವಾಗಿದ್ದು, ಇಲ್ಲಿ ಸೈನಿಕರು ಕಾರ್ಯ ನಿರ್ವಹಿಸುವುದೇ  ದುಸ್ತರವಾಗಿದೆ. ಹೀಗಾಗಿ ಯೋಧರು ಸುರಕ್ಷಿತ ಪ್ರದೇಶಗಳಲ್ಲಿ ಕ್ಯಾಂಪ್ ನಿರ್ಮಿಸಿಕೊಳ್ಳುವಂತೆ ಸೇನಾಧಿಕಾರಿಗಳು ಸೂಚನೆ ನೀಡಿದ್ದಾರೆ ಎಂದು ತಿಳಿದುಬಂದಿದೆ. ಇನ್ನು ಕಳೆದ 5 ವರ್ಷಗಳಿಗೆ  ಹೋಲಿಸಿದರೆ ಸಿಯಾಚಿನ್ ನಲ್ಲಿ 12 ಡಿಗ್ರಿಯಷ್ಟು ತಾಪಮಾನ ಕುಸಿತ ಕಂಡುಬಂದಿದೆ. ಚಳಿಯ ತೀವ್ರತೆಯಿಂದ ಉಂಟಾಗುವ ಹಿಮವ್ರಣ (ಗಾಯ) ಯೋಧರನ್ನು ಕಾಡುತ್ತಿದ್ದು, ಸೈನಿಕರು  ಶತ್ರುಗಳ ದಾಳಿಗಿಂತ ಚಳಿಯಿಂದ ಸಾವನ್ನಪ್ಪುತ್ತಿದ್ದಾರೆ.

ಹೀಗಾಗಿ ಕಾಶ್ಮೀರದ ಉತ್ತರ ತುದಿಯಲ್ಲಿರುವ ಸೇನಾ ಶಿಬಿರವನ್ನು ಸುರಕ್ಷಿತ ಸ್ಥಳಕ್ಕೆ ವರ್ಗಾವಣೆ ಮಾಡಲಾಗುತ್ತಿದೆ. ಯೋಧರ ಕ್ಷೇಮ ಪಾಲನೆಗಾಗಿ ನಿಟ್ಟಿನಲ್ಲಿ ಚಳಿಗಾಲ ಕಾಲಿಡುವ ಮುನ್ನ ಸೇನಾ  ತುಕಡಿಗಳು ಸುರಕ್ಷಿತ ನೆಲೆಯತ್ತ ಪಯಣ ಬೆಳೆಸಿದೆ ಎಂದು ಹಿರಿಯ ಮಿಲಿಟರಿ ಅಧಿಕಾರಿಗಳು ತಿಳಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕೇಂದ್ರ ಸರ್ಕಾರ ತೀರ ಅನಿವಾರ್ಯತೆ ಇದ್ದರೆ  ಮಾತ್ರ ಕ್ಯಾಂಪ್ ಸ್ಥಳಾಂತರ ಮಾಡುವಂತೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದೆ.

ಸಿಯಾಚಿನ್ ನಲ್ಲಿ ತೀವ್ರ ಚಳಿಗೆ ಬಲಿಯಾದ ಸೈನಿಕರ ಸಂಖ್ಯೆಯಲ್ಲಿ ಶೇ.20ರಷ್ಟು ಹೆಚ್ಚಳವಾಗಿದ್ದು, ಈ ವರ್ಷದ ಆರಂಭದಲ್ಲಿ ತೀವ್ರ ಚಳಿ, ಹಿಮಪಾತ ಮತ್ತು ಉಸಿರು ಗಟ್ಟಿಸುವ ವಾತಾವರಣದ  ಪರಿಣಾಮ 10 ಯೋಧರು ಪಾಕ್​ನ ಗಡಿ ನಿಯಂತ್ರಣ ರೇಖೆ ಸಮೀಪವಿರುವ ಸೋನಮ್ ಪ್ರದೇಶದಲ್ಲಿ ಮೃತರಾಗಿದ್ದರು. ಕರ್ನಾಟಕದವರೇ ಅದ ಹನುಮಂತಪ್ಪ ಕೊಪ್ಪದ್ ಎಂಬ ಯೋಧ 30  ಅಡಿ ಆಳದ ಹಿಮದಲ್ಲಿ 6 ದಿನ ಸಿಲುಕಿ, ಬದುಕಿ ಬಂದಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದರು.

ಸನ್ನದ್ಧ ಸ್ಥಿತಿಯಲ್ಲಿ ಹಿಮಪಾತ ರಕ್ಷಣಾ ತಂಡ
ಇದೇ ವೇಳೆ ಸಿಯಾಚಿನ್ ನಲ್ಲಿ ಸಂಭವಿಸುವ ದಿಢೀರ್ ಹಿಮಪಾತಗಳಿಂದ ಸೈನಿಕರನ್ನು ರಕ್ಷಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ತಂತ್ರಜ್ಞಾನದ ಮೊರೆ ಹೋಗಿದೆ. ಹೀಗಾಗಿ ಸೈನಿಕರಿಗೆ  ಅತ್ಯಾಧುನಿಕ ರೇಡಿಯೋ ಉಪಕರಣಗಳನ್ನು ನೀಡಲಾಗಿದ್ದು, ಇದರ ಮೂಲಕವಾಗಿ ಸೈನಿಕರಿಗೆ ನಿತ್ಯ ಹಿಮಪಾತ ಮುನ್ಸೂಚನೆ, ನಿರ್ಧಿಷ್ಟ ಸೆಕ್ಟರ್ ಮುನ್ಸೂಚನೆ ಇತರೆ ಸೂಚನೆಗಳನ್ನು  ರೇಡಿಯೋ ಮೂಲಕ ನೀಡಲಾಗುತ್ತಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com