

ನವದೆಹಲಿ: ದೆಹಲಿಯ ಒಖ್ಲಾ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಆಮ್ ಆದ್ಮಿ ಪಕ್ಷದ ಶಾಸಕ ಅಮಾನತುಲ್ಲಾಹ್ ಖಾನ್ ನ್ನು ದೆಹಲಿ ಪೊಲೀಸರು ಜು.24 ರಂದು ಬಂಧಿಸಿದ್ದಾರೆ.
ಅಮಾನತುಲ್ಲಾಹ್ ಖಾನ್ ಪ್ರತಿನಿಧಿಸುತ್ತಿರುವ ಕ್ಷೇತ್ರದಲ್ಲಿ ವಿದ್ಯುತ್ ಪೂರೈಕೆ ಸಮರ್ಪಕವಾಗಿಲ್ಲದ ಕಾರಣ, ಮಹಿಳೆಯೊಬ್ಬರು ಈ ಬಗ್ಗೆ ದೂರು ನೀಡಿದ್ದರು. ದೂರವಾಣಿ ಮೂಲಕ ದೂರು ನೀಡಿದ ನಂತರ ಮಹಿಳೆ ಜು.20 ರಂದು ಅಮಾನತುಲ್ಲಾಹ್ ಖಾನ್ ನಿವಾಸಕ್ಕೆ ಭೇಟಿ ನೀಡಿದ್ದರು. ಈ ವೇಳೆ ಅಮಾನತುಲ್ಲಾಹ್ ಖಾನ್ ಬೆಂಬಲಿಗರು ಆಕೆಯನ್ನು ನಿಂದಿಸಿ, ಗಂಭೀರ ಪರಿಣಾಮ ಎದುರಿಸುವ ಎಚ್ಚರಿಕೆ ನೀಡಿದ್ದರು. ಈ ಬಗ್ಗೆ ಪೊಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆದರೆ ಮತ್ತೆ ಅಮಾನತುಲ್ಲಾಹ್ ಖಾನ್ ತಮಗೆ ಬೆದರಿಕೆ ಹಾಕಿದ್ದಾರೆ ಎಂದು ದೂರುದಾರ ಮಹಿಳೆ ಆರೋಪಿಸಿರುವುದರಿಂದ ಶಾಸಕನನ್ನು ಪೊಲೀಸರು ಬಂಧಿಸಿದ್ದಾರೆ. ದೂರು ದಾಖಲಾದ ಬಳಿಕ ಮಹಿಳೆಗೆ ಬೆದರಿಕೆ ಹಾಕುವುದು ಅಲ್ಲದೆ, ಸಾಕ್ಷ್ಯಗಳನ್ನು ನಾಶ ಮಾಡಲು ಯತ್ನಿಸಿದ ಆರೋಪದಡಿ ದೆಹಲಿಯ ಆಪ್ ಶಾಸಕನನ್ನು ಬಂಧಿಸಲಾಗಿದೆ ಎಂದು ದಕ್ಷಿಣ ದೆಹಲಿ ಹೆಚ್ಚುವರಿ ಪೊಲೀಸ್ ಆಯುಕ್ತ ರಾಜೀವ್ ರಂಜಾನ್ ತಿಳಿಸಿದ್ದಾರೆ. ದೆಹಲಿ ಆಪ್ ಶಾಸಕನ ವಿರುದ್ಧ ದೂರು ನೀಡಿರುವ ಮಹಿಳೆ, ಶಾಸಕನ ಸೂಚನೆಯಂತೆ ಆತನ ಬೆಂಬಲಿಗರು ಬೆದರಿಕೆ ಹಾಕಿದ್ದರು ಎಂದು ಆರೋಪಿಸಿದ್ದಾರೆ.