ಸೇನಾ ಶಸ್ತ್ರಾಗಾರದಲ್ಲಿ ಬೆಂಕಿ: ಮೃತ ಯೋಧರ ಶವಗಳ ಗುರುತು ಪತ್ತೆಗೆ ಡಿಎನ್ಎ ಪರೀಕ್ಷೆ

ಮಹಾರಾಷ್ಟ್ರ ವಾದ್ರಾದಲ್ಲಿನ ಸೇನಾ ಶಸ್ತ್ರಾಗಾರದಲ್ಲಿ ಸಂಭವಿಸಿದ ಅಗ್ನಿ ಅನಾಹುತ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾವಿನ ಸಂಖ್ಯೆ 19 ಕ್ಕೇರಿದ್ದು, ಮೃತ ಯೋಧ ಶವ ಪತ್ತೆಗೆ ಇದೀಗ ಅಧಿಕಾರಿಗಳು...
ಸೇನಾ ಶಸ್ತ್ರಾಗಾರದಲ್ಲಿ ಬೆಂಕಿ
ಸೇನಾ ಶಸ್ತ್ರಾಗಾರದಲ್ಲಿ ಬೆಂಕಿ
Updated on: 

ನವದೆಹಲಿ: ಮಹಾರಾಷ್ಟ್ರ ವಾದ್ರಾದಲ್ಲಿನ ಸೇನಾ ಶಸ್ತ್ರಾಗಾರದಲ್ಲಿ ಸಂಭವಿಸಿದ ಅಗ್ನಿ ಅನಾಹುತ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾವಿನ ಸಂಖ್ಯೆ 19 ಕ್ಕೇರಿದ್ದು, ಮೃತ ಯೋಧ ಶವ ಪತ್ತೆಗೆ ಇದೀಗ ಅಧಿಕಾರಿಗಳು ಡಿಎನ್ಎ ಮೊರೆ ಹೋಗಲು ತೀರ್ಮಾನಿಸಿದ್ದಾರೆಂದು ತಿಳಿದುಬಂದಿದೆ.

ಸೇನಾ ಶಸ್ತ್ರಾಗಾರದಲ್ಲಿ ಸೋಮವಾರ ಮಧ್ಯರಾತ್ರಿ 1 ಗಂಟೆ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿತ್ತು. ಇದರಂತೆ ಸೇನಾ ಸಿಬ್ಬಂದಿ ಕೂಡಲೇ ಕಾರ್ಯಪ್ರವೃತ್ತರಾಗಿ ರಾತ್ರಿಯಿಡೀ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ನಿಯಂತ್ರಣಕ್ಕೆ ತಂದಿದ್ದರು.

ನಿನ್ನೆ ಕೂಡ ಕಾರ್ಯಾಚರಣೆ ಮುಂದುವರೆಸಿದ್ದ ಸಿಬ್ಬಂದಿಗೆ ಮತ್ತೆ ಮೂವರು ಯೋಧರ ಮೃತ ದೇಹಗಳು ಪತ್ತೆಯಾಗಿದ್ದವು. ಇದರಂತೆ ಸಾವಿನ ಸಂಖ್ಯೆ 19ಕ್ಕೆ ಏರಿಕೆಯಾಗಿದ್ದು, ಮೃತ ಯೋಧರ ದೇಹಗಳು ಸುಟ್ಟು ಹೋಗಿರುವುದರಿಂದ ಗುರ್ತಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಡಿಎನ್ಎ ಪರೀಕ್ಷೆ ನಡೆಸಲು ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸೇನಾ ಉನ್ನತ ಮೂಲಗಳು ಮಾಹಿತಿ ನೀಡಿದೆ.

ಶಸ್ತ್ರಾಗಾರದಲ್ಲಿ ಒಂದಾದ ನಂತರ ಮತ್ತೊಂದರಂತೆ ಸ್ಫೋಟಗಳು ಸಂಭವಿಸಿದ ಪರಿಣಾಮ ಸಾಕಷ್ಟು ಮೃತ ದೇಹಗಳು ಭಾಗಗಳಾಗಿ ಹೋಗಿವೆ. ಹೀಗಾಗಿ ಮೃತರನ್ನು ಗುರ್ತಿಸಲು ಸಾಧ್ಯವಾಗುತ್ತಿಲ್ಲ. ಗುರ್ತಿಸಲು ಡಿಎನ್ಎ ಒಂದೇ ಮಾರ್ಗವಿದ್ದು, ಡಿಎನ್ಎ ಪರೀಕ್ಷೆ ನಡೆಸಲು ತೀರ್ಮಾನಿಸಲಾಗಿದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಇನ್ನು ಸ್ಫೋಟದ ಪರಿಣಾಮ 7000 ಎಕರೆ ಪ್ರದೇಶ ಸಾಕಷ್ಟು ಹಾನಿಗೊಳಗಾಗಿದ್ದು, ಈ ಪ್ರದೇಶವನ್ನು ಸ್ವಚ್ಛಗೊಳಿಸುವುದು ಇದೀಗ ಸೇನೆಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.

ಸ್ಫೋಟ ಸಂಭವಿಸಿದ ಸ್ಥಳದಲ್ಲಿ ಸ್ವಚ್ಛತೆ ಮಾಡುವುದು ಆಡಳಿತ ಮಂಡಳಿಗೆ ದೊಡ್ಡ ಸವಾಲಾಗಿದೆ. ಸುಟ್ಟು ಹೋದ ಮರ ಗಾಜು ಹಾಗೂ ಇನ್ನಿತರೆ ವಸ್ತುಗಳು ಸ್ಥಳದಲ್ಲಿ ಬಿದ್ದಿವೆ. ಶಸ್ತ್ರಾಗಾರ ಪ್ರದೇಶ ಸುರಕ್ಷಿತ ತಾಣವಾಗಿದೆ ಎಂದು ಘೋಷಿಸಲು ತಿಂಗಳುಗಳ ಕಾಲ ಬೇಕಾಗಬಹುದು. ಘಟನೆಗೆ ಪ್ರಮುಖ ಕಾರಣ ಕುರಿತಂತೆ ತನಿಖೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಅಗ್ನಿ ಅವಘಡದ ಸಂಭವಿಸಿದ ನಂತರ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಹಾಗೂ ಸೇನಾ ಮುಖ್ಯಸ್ಥ ಜನರಲ್ ದಲ್ಬೀರ್ ಸಿಂಗ್ ಅವರು ದುರಂತ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ನಂತರ ಆಸ್ಪತ್ರೆಗೆ ಭೇಟಿ ನೀಡಿ ಗಾಯಗೊಂಡ ಯೋಧರ ಆರೋಗ್ಯವನ್ನು ವಿಚಾರಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com