

ಛತ್ತೀಸ್ ಗಢ: ಕಾಂಗ್ರೆಸ್ ಹೈಕಮಾಂಡ್ ವಿರುದ್ಧ ಬಂಡಾಯ ಎದ್ದಿರುವ ಛತ್ತೀಸ್ ಗಢ ಮಾಜಿ ಮುಖ್ಯಮಂತ್ರಿ ಅಜಿತ್ ಜೋಗಿ, ತಾವು ಪ್ರತ್ಯೇಕ ಪಕ್ಷ ಸ್ಥಾಪಿಸುವ ಸೂಚನೆ ನೀಡಿದ್ದಾರೆ. ಇದೇ 6ರಂದು ಅವರು ಹೊಸ ಪಕ್ಷ ಘೋಷಿಸುವ ಸಾಧ್ಯತೆಯಿದೆ.
ಅಜಿತ್ ಜೋಗಿ ಮತ್ತು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಮಧ್ಯೆ ಇತ್ತೀಚೆಗೆ ಸಂಬಂಧ ಹಳಸಿತ್ತು. ಅವರ ಪುತ್ರ ಅಮಿತ್ ಜೋಗಿಯವರು ಕಾಂಗ್ರೆಸ್ ಗೆ ಮರು ಸೇರ್ಪಡೆಯಾಗುವುದು ರಾಹುಲ್ ಗಾಂಧಿಗೆ ಇಷ್ಟವಿರಲಿಲ್ಲ.
ಛತ್ತೀಸ್ ಗಢದ ಅಂತಗರ್ ಉಪ ಚುನಾವಣೆ ಫಿಕ್ಸಿಂಗ್ ಗೆ ಸಂಬಂಧಪಟ್ಟಂತೆ ಟೇಪು ಬಹಿರಂಗಗೊಂಡಾಗ ಅಮಿತ್ ಜೋಗಿಯನ್ನು ರಾಜ್ಯ ಘಟಕದಿಂದ ವಜಾಗೊಳಿಸಲಾಗಿತ್ತು. ಕಾಂಗ್ರೆಸ್ ಕೇಂದ್ರ ಘಟಕ ಅಮಿತ್ ಜೋಗಿಯನ್ನು ಪಕ್ಷದಿಂದ ವಜಾಗೊಳಿಸಿರುವ ಕ್ರಮವನ್ನು ಪುರಸ್ಕರಿಸಿತ್ತು.
ರಾಹುಲ್ ಗಾಂಧಿ ಜೊತೆ ಭಿನ್ನಾಭಿಪ್ರಾಯ: ಅಮಿತ್ ಜೋಗಿಯನ್ನು ಪಕ್ಷದಿಂದ ವಜಾಗೊಳಿಸಿರುವ ಕ್ರಮವನ್ನು ಹಿಂತೆಗೆದುಕೊಳ್ಳುವಂತೆ ಮನವಿ ಮಾಡಿಕೊಳ್ಳಲು ದೆಹಲಿಗೆ ಹೋಗಿ ರಾಹುಲ್ ಗಾಂಧಿಯನ್ನು ಭೇಟಿ ಮಾಡುವ ಉದ್ದೇಶ ಹೊಂದಿದ್ದರು. ಆದರೆ ಭೇಟಿಗೆ ಅವರಿಗೆ ಅವಕಾಶ ಸಿಕ್ಕಿರಲಿಲ್ಲ. ರಾಹುಲ್ ಗಾಂಧಿಯವರು ಕಾಂಗ್ರೆಸ್ ಅಧ್ಯಕ್ಷರಾಗುತ್ತಾರೆ ಎಂದು ಸುದ್ದಿ ಕಳೆದ ಕೆಲವು ದಿನಗಳಿಂದ ಮಾಧ್ಯಮಗಳಲ್ಲಿ ಹಬ್ಬುತ್ತಿರುವುದರಿಂದ ಅಜಿತ್ ಜೋಗಿ ಇದೀಗ ಕಾಂಗ್ರೆಸ್ ತೊರೆದು ಹೋಗುವ ನಿರ್ಧಾರ ಪ್ರಕಟಿಸಿದ್ದಾರೆ.
ರಾಹುಲ್ ಗಾಂಧಿಯವರೊಂದಿಗಿನ ಭಿನ್ನಾಭಿಪ್ರಾಯಗಳನ್ನು ಬಗೆಹರಿಸಿ ಕಾಂಗ್ರೆಸ್ ನಲ್ಲಿಯೇ ಉಳಿಯುತ್ತೀರಾ ಎಂದು ಸುದ್ದಿಗಾರರು ಕೇಳಿದಾಗ, ಖಂಡಿತಾ ಇಲ್ಲ, ಕೇಂದ್ರ ನಾಯಕರೊಂದಿಗೆ ಮಾತನಾಡುವುದೆಂದರೆ ಕೋಣನ ಮುಂದೆ ಕಿನ್ನರಿ ಬಾರಿಸಿದಂತೆ ಎಂದು ಹೇಳಿದ್ದಾರೆ.
ಅಜಿತ್ ಜೋಗಿಯವರು ಹೊಸ ಪ್ರಾದೇಶಿಕ ಪಕ್ಷ ರಚನೆ ಮಾಡಿದರೆ ಅವರಿಗೆ ಎಷ್ಟರ ಮಟ್ಟಿಗೆ ಬೆಂಬಲ ಸಿಗುತ್ತದೆ, ಕಾಂಗ್ರೆಸ್ ಮತ್ತು ಈಗ ಅಧಿಕಾರದಲ್ಲಿರುವ ಬಿಜೆಪಿಗೆ ಯಾವ ರೀತಿಯಲ್ಲಿ ಪರಿಣಾಮ ಬೀರುತ್ತದೆ ಎಂಬುದನ್ನು ನೋಡಬೇಕು.