ಮಥುರಾ ಹಿಂಸಾಚಾರ: ಒತ್ತುವರಿದಾರರ ಬಳಿ ಶಸ್ತ್ರಾಸ್ತ್ರವಿದ್ದ ಬಗ್ಗೆ ಮಾಹಿತಿಯಿರಲಿಲ್ಲ; ಅಖಿಲೇಶ್

ಇಲ್ಲಿನ ಜವಾಹರ್ ಬಾಗ್ ಪ್ರದೇಶದಲ್ಲಿ ಅಕ್ರಮ ಭೂ ಒತ್ತುವರಿ ತೆರವು ಕಾರ್ಯಾಚರಣೆ ವೇಳೆ ಸಂಭವಿಸಿದ ಘರ್ಷಣೆಯನ್ನು ...
ಉತ್ತರ ಪ್ರದೇಶ ಮುಖ್ಯಮಂತ್ರಿ ಅಖಿಲೇಶ್ ಯಾದವ್
ಉತ್ತರ ಪ್ರದೇಶ ಮುಖ್ಯಮಂತ್ರಿ ಅಖಿಲೇಶ್ ಯಾದವ್
Updated on: 

ಲಕ್ನೋ: ಇಲ್ಲಿನ ಜವಾಹರ್ ಬಾಗ್ ಪ್ರದೇಶದಲ್ಲಿ ಅಕ್ರಮ ಭೂ ಒತ್ತುವರಿ ತೆರವು ಕಾರ್ಯಾಚರಣೆ ವೇಳೆ ಸಂಭವಿಸಿದ ಘರ್ಷಣೆಯನ್ನು ಹತ್ತಿಕ್ಕಲು ಪೊಲೀಸರು ವಿಫಲರಾಗಿದ್ದಾರೆ, ಅವರು ಸಿದ್ಧತೆ ನಡೆಸಿರಲಿಲ್ಲ ಎಂದು ಮುಖ್ಯಮಂತ್ರಿ ಅಖಿಲೇಶ್ ಯಾದವ್ ಒಪ್ಪಿಕೊಂಡಿದ್ದಾರೆ.

ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪೊಲೀಸರು ಸಂಪೂರ್ಣ ಸಿದ್ಧತೆಯೊಂದಿಗೆ ಅಲ್ಲಿಗೆ ತೆರಳಬೇಕಾಗಿತ್ತು. ಪ್ರತಿಭಟನಾಕಾರರು ಶಸ್ತ್ರಾಸ್ತ್ರಗಳನ್ನು ಹೊಂದಿದ್ದರು ಎಂದು ಗೊತ್ತಿರಲಿಲ್ಲ. ಪ್ರತಿಭಟನಾಕಾರರು ಆಜಾದ್ ಭರತ್ ವಿದಿಕ್ ವೈಚಾರಿಕ್ ಕ್ರಾಂತಿ ಸತ್ಯಾಗ್ರಹಿ ಸಂಘಟನೆಯವರು ಎಂದು ನಂಬಲಾಗಿದೆ.

ಮಥುರಾ ಹಿಂಸಾಚಾರದ ದುಷ್ಕರ್ಮಿಗಳ ವಿರುದ್ಧ ಪೊಲೀಸರು ತೆಗೆದುಕೊಂಡ ಕ್ರಮವನ್ನು ಸಮರ್ಥಿಸಿಕೊಂಡ ಮುಖ್ಯಮಂತ್ರಿ, ಭೂ ಒತ್ತುವರಿ ಮಾಡಿಕೊಂಡವರ ಜೊತೆ ಮಾತುಕತೆ ನಡೆಸಲು ಅಧಿಕಾರಿಗಳು ಹಲವು ಬಾರಿ ಪ್ರಯತ್ನಪಟ್ಟಿದ್ದರು, ಅವರಿಗೆ ಎಚ್ಚರಿಕೆಯನ್ನು ಸಹ ನೀಡಿದ್ದರು, ಆದರೆ ಅವರು ಭೂಮಿ ಬಿಟ್ಟುಕೊಟ್ಟಿರಲಿಲ್ಲ. ಹಾಗಾಗಿ ಪೊಲೀಸರು ಅಲ್ಲಿನ ನಿವಾಸಿಗಳ ವಿರುದ್ಧ ಕ್ರಮ ತೆಗೆದುಕೊಳ್ಳುವುದು ಅನಿವಾರ್ಯವಾಗಿತ್ತು ಎಂದರು.

ಆಯುಕ್ತರ ಮಟ್ಟದಲ್ಲಿ ಪ್ರಕರಣ ಕುರಿತು ತನಿಖೆ ನಡೆಸಲಾಗುವುದು ಮತ್ತು ಯಾರೆಲ್ಲಾ ಅಪರಾಧಿಗಳೆಂದು ಸಾಬೀತಾಗುತ್ತಾರೆಯೋ ಅವರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.

ಮಥುರಾ ಹಿಂಸಾಚಾರಕ್ಕೆ ಕಾರಣಕರ್ತರಾದವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಯಾದವ್ ತಿಳಿಸಿದರು. ಘರ್ಷಣೆಯಲ್ಲಿ 24 ಮಂದಿ ಸಾವನ್ನಪ್ಪಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಮುಖ್ಯಮಂತ್ರಿ, ಮಥುರಾ ಹಿಂಸಾಚಾರಕ್ಕೆ ಕಾರಣಕರ್ತರಾದವರ ವಿರುದ್ಧ ಕಾನೂನಿನಡಿ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು. ಅಪರಾಧಿಗಳಿಗೆ ಬೇಗನೆ ಶಿಕ್ಷೆ ನೀಡಲಾಗುವುದು ಎಂದು ಹೇಳಿದ್ದಾರೆ. ಸಾವನ್ನಪ್ಪಿರುವ ಪೊಲೀಸರ ಕುಟುಂಬದವರಿಗೆ ನೆರವು ನೀಡುವ ಭರವಸೆಯನ್ನೂ ಕೊಟ್ಟಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com